
ಧಾರವಾಡ: ಮನಸ್ಸಿನ ಖಿನ್ನತೆ ಮತ್ತು ಆತಂಕವನ್ನು ನಿವಾರಿಸಿ, ಮನಸ್ಸನ್ನು ಆರೋಗ್ಯದಾಯಕವಾಗಿಡಲು ಸಂಗೀತವು ಅತ್ಯಗತ್ಯವಾಗಿದೆ. ಸಂಗೀತ ಹಾಗೂ ನೃತ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಕೃಷಿ ವಿಜ್ಞಾನಿ ಡಾ. ಎಂ. ಎಸ್. ಪಾಟೀಲ ಅವರು ಅಭಿಪ್ರಾಯಪಟ್ಟರು.
ಅವರು ಗುರುವಾರದಂದು ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಗೀತಕ್ಕೆ ಇತ್ತೀಚಿನದಲ್ಲದ ೫ ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಸಾಮವೇದದಲ್ಲಿಯೂ ಸಂಗೀತದ ಉಲ್ಲೇಖವಿದ್ದು, ಮನುಷ್ಯನ ಮನರಂಜನೆಗೆ ಇದು ಬೇಕೇಬೇಕು. ನಾಗರಿಕತೆ ಪ್ರಾರಂಭವಾದಾಗಲೇ ಸಂಗೀತವು ಹುಟ್ಟಿಕೊಂಡಿತು ಮತ್ತು ಮನುಷ್ಯ ಎಲ್ಲಿಯವರೆಗೆ ಇರುತ್ತಾನೋ ಅಲ್ಲಿಯವರೆಗೆ ಸಂಗೀತ ಜೀವಂತವಾಗಿರುತ್ತದೆ ಎಂದು ಡಾ. ಪಾಟೀಲ ನುಡಿದರು. ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನ ನೃತ್ಯ ಪ್ರಕಾರಗಳಿದ್ದು, ಕರ್ನಾಟಕದಲ್ಲಿ ವೀರಗಾಸೆ ಮತ್ತು ಯಕ್ಷಗಾನವು ಪ್ರಧಾನ ನೃತ್ಯ ಪ್ರಕಾರಗಳಾಗಿವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ನರೇಂದ್ರದ ಆನಂದ ಪಾಟೀಲ ಅವರಿಂದ ಸುಶ್ರಾವ್ಯ ಸಂಗೀತ ಕಾರ್ಯಕ್ರಮ ಜರುಗಿತು. ಇವರಿಗೆ ವಿಜಯಕುಮಾರ ಸುತಾರ ತಬಲಾ ಸಾಥ್ ಹಾಗೂ ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಿ ಸಹಕರಿಸಿದರು. ನಂತರ, ಧಾರವಾಡದ ಕಲಾ ಶಕ್ತಿ ಫೌಂಡೇಶನ್ ತಂಡದ ಸದಸ್ಯರು ವೈವಿಧ್ಯಮಯವಾದ ಭರತನಾಟ್ಯ ನೃತ್ಯವನ್ನು ಅತ್ಯುತ್ತಮವಾಗಿ ಪ್ರಸ್ತುತಪಡಿಸಿ ಸಭಿಕರ ಗಮನ ಸೆಳೆದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಜಿನದತ್ತ ಹಡಗಲಿ, ಮಲ್ಲು ಪಾಟೀಲ, ಹಾಗೂ ಆನಂದ್ ಪಾಟೀಲ ಉಪಸ್ಥಿತರಿದ್ದರು. ಶಿವಾನಂದ ಭಾವಿಕಟ್ಟಿ ಅವರು ಸ್ವಾಗತಿಸಿದರು. ಶಂಕರ ಹರಗತ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಶಂಕರ ಕುಂಬಿ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವರಾಜ ಬೆಂಗೇರಿ, ಎಂ. ಎಂ. ಚಿಕ್ಕಮಠ, ಶಂಕರ ಬೆಟೆಗೇರಿ, ಶಂಕರ ಘಟ್ನಟ್ಟಿ, ಚಿನ್ಮಯ ಪಾಟೀಲ, ಸಿ. ಎಸ್. ಪಾಟೀಲ ಕುಲಕರ್ಣಿ ಸೇರಿದಂತೆ ಮುಂತಾದ ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

