
ಕುಂದಗೋಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಖೇಲೋ ಇಂಡಿಯಾ’ ಹಾಗೂ ‘ಫಿಟ್ ಇಂಡಿಯಾ’ ಅಭಿಯಾನದ ಆಶಯದಂತೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮಹತ್ವಾಕಾಂಕ್ಷೆಯ ‘ಧಾರವಾಡ ಸಂಸದ ಕ್ರೀಡಾ ಮಹೋತ್ಸವ 2025-26’ ಡಿಸೆಂಬರ್ 25 ಮತ್ತು 26 ರಂದು ಕುಂದಗೋಳ ಪಟ್ಟಣದಲ್ಲಿ ಅತ್ಯಂತ ವೈಭವದಿಂದ ಜರುಗಲಿದೆ ಎಂದು ಶಾಸಕ ಎಂ.ಆರ್. ಪಾಟೀಲ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಡಿಸೆಂಬರ್ 25 ರಂದು ಬೆಳಿಗ್ಗೆ 10 ಗಂಟೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು. ಕುಂದಗೋಳ ಪಟ್ಟಣದ ಪ್ರವಾಸಿ ಮಂದಿರ (ಐಬಿ) ಎದುರುಗಡೆ ಇರುವ ಶಿವಾನಂದ ಶಾಲೆಯ ಪಕ್ಕದ ಮೈದಾನದಲ್ಲಿ ಈ ಬೃಹತ್ ಕ್ರೀಡಾ ಹಬ್ಬ ನಡೆಯಲಿದೆ ಎಂದು ಅವರು ವಿವರಿಸಿದರು.
ಈ ಕ್ರೀಡಾ ಮಹೋತ್ಸವದಲ್ಲಿ ಗ್ರಾಮೀಣ ಹಾಗೂ ದೇಶಿಯ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕಬಡ್ಡಿ, ಖೋ-ಖೋ ಮತ್ತು ವಾಲಿಬಾಲ್‌ನಂತಹ ಗುಂಪು ಆಟಗಳ ಜೊತೆಗೆ 100 ಮೀಟರ್ ಹಾಗೂ 800 ಮೀಟರ್ ಓಟ, ಎತ್ತರ ಜಿಗಿತ, ಉದ್ದ ಜಿಗಿತ ಮತ್ತು ಗುಂಡು ಎಸೆತದಂತಹ ವೈಯಕ್ತಿಕ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಗುಂಪು ಆಟಗಳಲ್ಲಿ ವಿಜೇತರಾಗುವ ತಂಡಗಳಿಗೆ ಪ್ರಥಮ ಬಹುಮಾನವಾಗಿ 30,000 ರೂ., ದ್ವಿತೀಯ ಬಹುಮಾನವಾಗಿ 20,000 ರೂ. ಹಾಗೂ ತೃತೀಯ ಮತ್ತು ಚತುರ್ಥ ಸ್ಥಾನ ಪಡೆಯುವ ತಂಡಗಳಿಗೆ ತಲಾ 10,000 ರೂ. ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. ಅದೇ ರೀತಿ ವೈಯಕ್ತಿಕ ವಿಭಾಗದಲ್ಲಿ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಪ್ರಥಮ 7,000 ರೂ., ದ್ವಿತೀಯ 5,000 ರೂ. ಹಾಗೂ ತೃತೀಯ 3,000 ರೂ. ನಗದು ಬಹುಮಾನದೊಂದಿಗೆ ಗೌರವಿಸಲಾಗುವುದು ಎಂದು ಬಹುಮಾನದ ಮೊತ್ತವನ್ನು ಘೋಷಿಸಿದರು.
ಪಾಶ್ಚಿಮಾತ್ಯ ಕ್ರೀಡೆಗಳ ಬದಲು ದೇಶಿಯ ಕ್ರೀಡೆಗಳನ್ನು ಮುನ್ನೆಲೆಗೆ ತರಬೇಕು ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಾಗಿದ್ದು, ಅದರಂತೆ ಕೇಂದ್ರ ಸಚಿವರು ನಿರಂತರವಾಗಿ ಕ್ರೀಡಾಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದರು. ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಯುವಜನತೆಯಲ್ಲಿ ಕ್ರೀಡಾ ಮನೋಭಾವ ಬೆಳೆಸುವ ಜೊತೆಗೆ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಬೃಹತ್ ಮಹೋತ್ಸವವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕ್ಷೇತ್ರದ ಸಾರ್ವಜನಿಕರು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಶಾಸಕ ಎಂ.ಆರ್. ಪಾಟೀಲ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎನ್.ಎನ್. ಪಾಟೀಲ, ಪ್ರಕಾಶ ಕುಬಿಹಾಳ, ನಾಗನಗೌಡ ಸಾತ್ಮಾರ, ಡಿ.ವೈ. ಲಕ್ಕನಗೌಡ್ರ, ಈರಣ್ಣ ಜಡಿ, ಸತೀಶ ಪಾಟೀಲ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

