​ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರ ಪರ ನಿಂತ ಸಚಿವ ಸಂತೋಷ ಲಾಡ್: ಬೇಡಿಕೆ ಈಡೇರಿಸುವ ಭರವಸೆ

Spread the love

ಧಾರವಾಡ: ವಿವಿಧ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಿ, ಕಾರ್ಯಕರ್ತೆಯರ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

​ಜನಸಂಖ್ಯೆ ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರನ್ನು ಸೇವೆಯಿಂದ ವಜಾಗೊಳಿಸುವ ಕ್ರಮವನ್ನು ಕೈಬಿಡಬೇಕು ಮತ್ತು ಗೌರವಧನ ಹೆಚ್ಚಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಪ್ರತಿಭಟನಾಕಾರರು ಸಚಿವರಿಗೆ ವಿವರಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ನಿಮ್ಮ ಹೋರಾಟದ ಜೊತೆಗೆ ಸರ್ಕಾರ ಇದೆ. ಈ ಎಲ್ಲ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಪೂರಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

​ವಿಶೇಷವಾಗಿ ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಜೀವದ ಹಂಗು ತೊರೆದು ಆಶಾ ಕಾರ್ಯಕರ್ತೆಯರು ಸಲ್ಲಿಸಿದ ಸೇವೆ ಅತ್ಯಂತ ಶ್ಲಾಘನೀಯವಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರವು ಶ್ರಮಿಕ ವರ್ಗದ ಪರವಾಗಿದ್ದು, ಯಾವುದೇ ಕಾರಣಕ್ಕೂ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ನಿಮ್ಮ ಸಂಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಸಚಿವರು ಆತ್ಮವಿಶ್ವಾಸ ತುಂಬಿದರು.

​ಇದೇ ವೇಳೆ ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಚಿವ ಸಂತೋಷ ಲಾಡ್ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರಿಗೆ ಹಸ್ತಾಂತರಿಸಿದರು. ಸಚಿವರ ಸಕಾರಾತ್ಮಕ ಭರವಸೆಯಿಂದಾಗಿ ಪ್ರತಿಭಟನಾ ಸ್ಥಳದಲ್ಲಿ ಆಶಾ ಕಾರ್ಯಕರ್ತೆಯರು ಸಚಿವರಿಗೆ ಜೈಕಾರ ಹಾಕುವ ಮೂಲಕ ಸಂತಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *