ಇನಾಂ ವೀರಾಪೂರ ಪ್ರಕರಣ ಕುರಿತ ಸಭೆಗ್ರಾಮದಲ್ಲಿ ಶಾಂತಿ ಕಾಪಾಡಿ; ಇಂತಹ ದುರ್ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿ– ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಸೂಚನೆ

Spread the love


ಧಾರವಾಡ, ಡಿ.30: ಇನಾಂ ವೀರಾಪೂರ ಗ್ರಾಮದಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಸುವಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ನಿಯಮಾನುಸಾರ ಪರಿಹಾರ ಮತ್ತು ಸಮರ್ಪಕ ರಕ್ಷಣೆ ಒದಗಿಸಬೇಕು ಎಂದು ಬಾಗಲಕೋಟ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಿದರು.

ಮಂಗಳವಾರದಂದು (ಡಿ.30) ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ ಸಚಿವರು, ಇನಾಂ ವೀರಾಪೂರ ಗ್ರಾಮದಲ್ಲಿ ನಡೆದ ದೌರ್ಜನ್ಯ ಹಾಗೂ ಕೊಲೆ ಪ್ರಕರಣದ ಕುರಿತು ಮಾಹಿತಿ ಪಡೆದು ಮಾತನಾಡಿದರು. ಇದು ಅಮಾನವೀಯ ಘಟನೆ ಆಗಿದ್ದು, ಇಂತಹ ಮನಸ್ಥಿತಿಗಳು ಸಮಾಜದ ವ್ಯವಸ್ಥೆಯನ್ನು ಹಾಳುಮಾಡುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಸರ್ಕಾರಿ ಅಭಿಯೋಜಕರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಹೇಳಿದರು.

ಈಗಾಗಲೇ ದಾಖಲಿಸಿರುವ ಎಫ್‌.ಐ.ಆರ್. ಪ್ರಕಾರ ಎಲ್ಲ ಆರೋಪಿತರ ಬಂಧನವಾಗಬೇಕು ಎಂದು ಸೂಚಿಸಿದ ಸಚಿವರು, ಗ್ರಾಮದ ಸಾಮರಸ್ಯ ಹಾಗೂ ಸೌಹಾರ್ದತೆಗೆ ಧಕ್ಕೆಯಾಗದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕ್ರಮವಹಿಸಬೇಕು ಎಂದರು.

ಈ ಘಟನೆಯಲ್ಲಿ ಕಂದಾಯ ಹಾಗೂ ಸಮಾಜ ಕಲ್ಯಾಣ ಇಲಾಖೆಗಳು ತಮ್ಮ ಕರ್ತವ್ಯ ನಿರ್ವಹಿಸಿದ್ದರೂ, ಇನ್ನಷ್ಟು ತ್ವರಿತವಾಗಿ ಸ್ಪಂದಿಸುವ ಅಗತ್ಯವಿತ್ತು ಎಂದು ಅವರು ಅಭಿಪ್ರಾಯಪಟ್ಟರು. ಗುಪ್ತವಾರ್ತಾ ವಿಭಾಗದಿಂದ ಸಕಾಲಿಕ ಮಾಹಿತಿ ಕೊರತೆಯಿಂದ ದುರ್ಘಟನೆ ತಡೆಯಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು. ಘಟನೆಯ ನಂತರ ವಿವಿಧ ಇಲಾಖೆಗಳು ಕೈಗೊಂಡ ಕ್ರಮಗಳು ಹಾಗೂ ನಿಯಮ ಪಾಲನೆಯ ಕುರಿತು ತನಿಖೆ ನಡೆಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಪಾರದರ್ಶಕ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸಚಿವರು ಸೂಚಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ವಿವೇಕಾನಂದ ದೊಡ್ಡಮನಿ ಕುಟುಂಬದ ಬೇಡಿಕೆಗಳನ್ನು ಜಿಲ್ಲಾಡಳಿತ ಹಂತದಲ್ಲಿ ಈಡೇರಿಸಲಾಗಿದೆ ಎಂದು ತಿಳಿಸಿದರು. ಕೆಲ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಈಗಾಗಲೇ ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗಿದ್ದು, ದೊಡ್ಡಮನಿ ಕುಟುಂಬವನ್ನು ಅವರ ಮನೆಗೆ ಮರಳಿಸಲಾಗಿದೆ. ಗ್ರಾಮಸ್ಥರು ಶಾಂತಿ ಹಾಗೂ ಸೌಹಾರ್ದತೆಯಿಂದ ಬದುಕುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್, ಕುಟುಂಬದವರಿಗೆ ಅಗತ್ಯ ಚಿಕಿತ್ಸೆ ಹಾಗೂ ಕೌನ್ಸಿಲಿಂಗ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ರೂ. 5 ಲಕ್ಷ ಪರಿಹಾರ ನೀಡಲಾಗಿದ್ದು, ಗ್ರಾಮ ಮತ್ತು ಕುಟುಂಬಗಳ ಮೇಲೆ ಮುನ್ನೆಚ್ಚರಿಕೆಯಾಗಿ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು, ಘಟನೆಯ ವಿವರಗಳು ಹಾಗೂ ಆರೋಪಿತರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಸಚಿವರಿಗೆ ವಿವರಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭ ಪಿ. ಅವರು ಸ್ವಾಗತಿಸಿ, ಘಟನೆಯ ಸಂಬಂಧ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ತಹಶೀಲ್ದಾರ್ ಜೆ.ಬಿ. ಮಜ್ಜಗಿ, ಇನ್ಸ್‌ಪೆಕ್ಟರ್ ಮುರಗೇಶ ಚನ್ನಣ್ಣವರ, ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ ಮಾತನಾಡಿ, ಘಟನೋತ್ತರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.

ಇದಲ್ಲದೆ ಡಿಸಿಆರ್‌ಇ ವಿಜಯಪುರ ಡಿವೈಎಸ್‌ಪಿ ಹಾಗೂ ಇನಾಂ ವೀರಾಪೂರ ಪ್ರಕರಣದ ತನಿಖಾಧಿಕಾರಿ ಸಂದೀಪಸಿಂಗ್ ಮುರಗೋಡ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಇನ್ಸ್‌ಪೆಕ್ಟರ್ ವೀರಭದ್ರಪ್ಪ ಕಡಿ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *