
ಧಾರವಾಡ: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಭೀಕರ ಯುದ್ಧ ಸಂಘರ್ಷದಿಂದ ಜಗತ್ತಿನಾದ್ಯಂತ ಅಶಾಂತಿ ಮೂಡಿರುವ ಬೆನ್ನಲ್ಲೇ, ಧಾರವಾಡದ ಯುವಕನೊಬ್ಬ ಜಾಗತಿಕ ಶಾಂತಿಗಾಗಿ ದೇವರಿಗೆ ವಿಶಿಷ್ಟವಾಗಿ ಮೊರೆ ಹೋಗುವ ಮೂಲಕ ಗಮನ ಸೆಳೆದಿದ್ದಾನೆ.
ತಾಲೂಕಿನ ನರೇಂದ್ರ ಗ್ರಾಮದಲ್ಲಿ ಗುರುವಾರ ಸಂಭ್ರಮದಿಂದ ಜರುಗಿದ ಶ್ರೀ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಈ ಅಪರೂಪದ ಘಟನೆ ಸಂಭವಿಸಿದೆ. ಜಾತ್ರೆಯ ಪ್ರಮುಖ ಆಕರ್ಷಣೆಯಾದ ರಥೋತ್ಸವದ ವೇಳೆ ಭಕ್ತರು ಹಣ್ಣು-ಜವನ ಎಸೆಯುವುದು ವಾಡಿಕೆ. ಆದರೆ, ಈ ಯುವಕ ಮಾತ್ರ ಬಾಳೆಹಣ್ಣಿನ ಮೇಲೆ ‘ಯುದ್ಧ ನಿಲ್ಲಲಿ… ಶಾಂತಿ ನೆಲೆಸಲಿ’ ಎಂಬ ಅರ್ಥಪೂರ್ಣ ಸಂದೇಶವನ್ನು ಬರೆದು ಅದನ್ನು ಭಕ್ತಿಯಿಂದ ತೇರಿಗೆ ಎಸೆದಿದ್ದಾನೆ.
ಯುದ್ಧದ ವ್ಯತಿರಿಕ್ತ ಪರಿಣಾಮಗಳು ಕೇವಲ ಆಯಾ ದೇಶಗಳಿಗಷ್ಟೇ ಸೀಮಿತವಾಗದೆ ಇಡೀ ಜಗತ್ತಿನ ಮೇಲೆ ಬೀರಲಿವೆ. ಹೀಗಾಗಿ ವಿಶ್ವದಾದ್ಯಂತ ಶಾಂತಿ ನೆಲೆಸಬೇಕು, ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎನ್ನುವುದು ಈ ಯುವಕನ ಆಶಯವಾಗಿತ್ತು. ತನ್ನ ಗ್ರಾಮದ ಆರಾಧ್ಯ ದೈವದ ಮುಂದೆ ಈ ರೀತಿ ಶಾಂತಿಯ ಬಿನ್ನಹ ಇಟ್ಟಿರುವ ಯುವಕನ ಫೋಟೋ ಮತ್ತು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಯುವಕನ ಈ ವಿಶಿಷ್ಟ ಕಾಳಜಿ ಮತ್ತು ಮಾನವೀಯ ನಡೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

