ಗರ್ಭಿಣಿ ಯುವತಿಯ ಬರ್ಬರ ಹತ್ಯೆ ಖಂಡಿಸಿ ಹುಬ್ಬಳ್ಳಿಯಲ್ಲಿ ಬೃಹತ್ ಪಂಜಿನ ಮೆರವಣಿಗೆ: ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ

Spread the love

ಹುಬ್ಬಳ್ಳಿ: ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಅಂತರ್ಜಾತಿ ವಿವಾಹವಾಗಿದ್ದ ಕಾರಣಕ್ಕೆ ಏಳು ತಿಂಗಳ ಗರ್ಭಿಣಿ ಯುವತಿಯನ್ನು ಆಕೆಯ ತಂದೆ ಮತ್ತು ಸಂಬಂಧಿಕರೇ ಸೇರಿ ಅಮಾನುಷವಾಗಿ ಹತ್ಯೆ ಮಾಡಿರುವುದನ್ನು ಖಂಡಿಸಿ, ಸೋಮವಾರ (ಡಿ. 28) ಸಂಜೆ ವಿವಿಧ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಸಲಾಯಿತು.

​ಮೇಲ್ಜಾತಿಯ ಯುವತಿಯು ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದನ್ನೇ ನೆಪವಾಗಿಸಿಕೊಂಡು ನಡೆದ ಈ ಘೋರ ಕೃತ್ಯವು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಈ ಪ್ರಕರಣದ ಆರೋಪಿಗಳನ್ನು ಕೇವಲ ಬಂಧಿಸಿದರೆ ಸಾಲದು, ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಅಥವಾ ಎನ್‌ಕೌಂಟರ್ ಮಾಡುವ ಮೂಲಕ ಕಠಿಣ ಸಂದೇಶ ರವಾನಿಸಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

​ಸೋಮವಾರ ಸಂಜೆ 7 ಗಂಟೆಗೆ ನಗರದ ವಿವೇಕಾನಂದ ಆಸ್ಪತ್ರೆಯಿಂದ ಹೊರಟ ಮೆರವಣಿಗೆಯು ಸ್ಟೇಷನ್ ರಸ್ತೆಯ ಮೂಲಕ ಸಾಗಿತು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಕೈಯಲ್ಲಿ ಪಂಜುಗಳನ್ನು ಹಿಡಿದು ಸರ್ಕಾರದ ವಿರುದ್ಧ ಹಾಗೂ ಆರೋಪಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೆರವಣಿಗೆಯು ಪೋಸ್ಟ್ ಆಫೀಸ್ ಮುಂಭಾಗವಿರುವ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ತಲುಪಿದ ನಂತರ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನೆಯನ್ನು ಮುಕ್ತಾಯಗೊಳಿಸಲಾಯಿತು.

​ಈ ಬೃಹತ್ ಪ್ರತಿಭಟನೆಯಲ್ಲಿ ಜೈ ಭೀಮ ಯುವ ಶಕ್ತಿ ಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಗುಂಟ್ರಾಳ, ಕರ್ನಾಟಕ ಮಾದಿಗ ದಂಡೋರದ ರಾಜ್ಯ ಕಾರ್ಯದರ್ಶಿ ಗಂಗಾಧರ ಪೇರೂರ, ಜೈ ಭೀಮ ಯುವ ಬ್ರಿಗೇಡ್‌ನ ಪ್ರಕಾಶ ಬಳ್ಳಾರಿ, ಜೈ ಭೀಮರಾವ್ ಯುವ ಸಂಘದ ವಿನೋದ ಕೊರವರ, ಜೈ ಭೀಮ್ ಹಿತರಕ್ಷಣಾ ಸಮಿತಿಯ ಅಣ್ಣಪ್ಪ ಸಿದ್ದಾಪುರ, ಜೈ ಕರ್ನಾಟಕ ಸಂಘಟನೆಯ ಸದ್ದಾಂ ನದಾಫ ಹಾಗೂ ಸರ್ವಧರ್ಮ ಸ್ವಯಂ ಸೇವಕರು ಸಂಘಟನೆಯ ಆನಂದ ದಲಭಂಜನ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕುವವರೆಗೂ ಈ ಹೋರಾಟ ನಿಲ್ಲದು ಎಂದು ಮುಖಂಡರು ಈ ಸಂದರ್ಭದಲ್ಲಿ ಎಚ್ಚರಿಸಿದರು.

Leave a Reply

Your email address will not be published. Required fields are marked *