ಮರ್ಯಾದಾ ಹತ್ಯೆ ಖಂಡಿಸಿ ಕುಂದಗೋಳದಲ್ಲಿ ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆಆರೋಪಿಗಳಿಗೆ ಕಾನೂನು ಶಿಕ್ಷೆಗೆ ಆಗ್ರಹ

Spread the love


ಕುಂದಗೋಳ: ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪುರ ಗ್ರಾಮದ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಅನ್ಯ ಜಾತಿಯ ಯುವತಿ ಮಾನ್ಯಾಳನ್ನು ಆಕೆಯ ಕುಟುಂಬದವರೇ ಮರ್ಯಾದಾ ಹತ್ಯೆ ಮಾಡಿ, ಆಕೆಯ ಪತಿಯ ಕುಟುಂಬದ ಮೇಲೆಯೂ ಪೈಶಾಚಿಕವಾಗಿ ಹಲ್ಲೆ ನಡೆಸಿರುವುದನ್ನು ಖಂಡಿಸಿ, ಚಲವಾದಿ ಸಮಾಜ ಹಿತ ರಕ್ಷಣಾ ಸಮಿತಿ ಹಾಗೂ ವಿವಿಧ ದಲಿತ ಪರ ಒಕ್ಕೂಟಗಳ ನೇತೃತ್ವದಲ್ಲಿ ಕುಂದಗೋಳದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಿರಸ್ತೆದಾರ ಮಹೇಶ ಶ್ಯಾನಬಾಳ ಅವರಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಮರ್ಯಾದಾ ಹತ್ಯೆಯಂತಹ ಅಮಾನವೀಯ ಕೃತ್ಯ ಎಸಗಿದ ಕೊಲೆಗಾರರನ್ನು ಕೂಡಲೇ ಗಲ್ಲಿಗೇರಿಸಬೇಕೆಂದು ಘೋಷಣೆಗಳನ್ನು ಕೂಗಿದರು.

ಇನಾಂವೀರಾಪುರ ಗ್ರಾಮದ ಸುಭಾಷ ದೊಡ್ಡಮನಿ ಅವರ ಪುತ್ರ ವಿವೇಕಾನಂದ ಮಾದರ ಅವರು ಅನ್ಯ ಜಾತಿಯ ಯುವತಿ ಮಾನ್ಯಾಳನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ವಿವಾಹದಿಂದ ಅವಮಾನಗೊಂಡ ಮಾನ್ಯಾಳ ಕುಟುಂಬದವರು ಮರ್ಯಾದಾ ಹತ್ಯೆ ನಡೆಸಿದ್ದಲ್ಲದೆ, ಇಡೀ ಕುಟುಂಬದವರ ಮೇಲೆ ಕೊಡಲಿಯಿಂದ ದಾಳಿ ಮಾಡಿ ಗಂಭೀರ ಗಾಯಗೊಳಿಸಿರುವ ಕೃತ್ಯವು ನಾಗರಿಕ ಸಮಾಜ ತಲೆತಗ್ಗಿಸುವಂತದ್ದಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರಕರಣದ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯವನ್ನು ಸ್ಥಾಪಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಗುರುನಾಥ ಚಲವಾದಿ, ಸುರೇಶ ಮಾಕಪ್ಪನವರ, ಲೋಕೇಶ್ ಬೇವಿನಮರದ, ಶರೀಫ ಜೋಗಮ್ಮನವರ, ರವಿ ದಾನಮ್ಮನವರ, ಕಾಂತೇಶ್ ದೊಡ್ಡಮನಿ, ಮೈಲಾರಪ್ಪ ಲಂಗಟದ, ಫಕೀರೇಶ ಮೂಕಾಶಿ, ಪರಶುರಾಮ ವೀರನಾಯಕರ, ರಮೇಶ್ ಚಲವಾದಿ, ಅಜ್ಜಪ್ಪ ತಳವಾರ್ ಸೇರಿದಂತೆ ಅಡಿವಪ್ಪ ಹೆಬ್ಬಸೂರು, ಪರಶುರಾಮ್ ಚಲವಾದಿ, ಬಸವರಾಜ್ ಗುಡನಕಟ್ಟಿ, ಚಂದು ಕಾಳೆ ಹಾಗೂ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.


Leave a Reply

Your email address will not be published. Required fields are marked *