
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆ (ಲಾಲ್ ಕಿಲಾ) ಮೆಟ್ರೋ ನಿಲ್ದಾಣದ ಗೇಟ್ ನಂ. 1 ರ ಸಮೀಪ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಭೀಕರ ಕಾರು ಸ್ಫೋಟ ಸಂಭವಿಸಿದ್ದು, ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ ಮತ್ತು 24 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ರಭಸಕ್ಕೆ ಹಲವಾರು ಕಾರುಗಳು ಮತ್ತು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕೆಂಪುಕೋಟೆಯ ಚಾಂದನಿ ಚೌಕ್‌ನ ಲಾಲ್ ಕಿಲಾ ಬಳಿಯ ಸುಭಾಷ್ ಮಾರ್ಗ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲಿಸಿದ್ದ ಅಥವಾ ನಿಧಾನವಾಗಿ ಚಲಿಸುತ್ತಿದ್ದ ಹ್ಯುಂಡೈ ಐ20 (Hyundai i20) ಕಾರಿನಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಸ್ಫೋಟವು ಎಷ್ಟೊಂದು ಪ್ರಬಲವಾಗಿತ್ತೆಂದರೆ, ದೇಹದ ಭಾಗಗಳು 150 ರಿಂದ 160 ಮೀಟರ್‌ಗಳಷ್ಟು ದೂರಕ್ಕೆ ಎಸೆಯಲ್ಪಟ್ಟಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಪಕ್ಕದ ವಾಹನಗಳು ಮತ್ತು ಅಂಗಡಿಗಳಿಗೂ ಬೆಂಕಿ ಹರಡಿತು. ಘಟನೆಯಲ್ಲಿ ಒಟ್ಟು 6 ಕಾರುಗಳು, 2 ಇ-ರಿಕ್ಷಾಗಳು ಮತ್ತು 1 ಆಟೋ ರಿಕ್ಷಾ ಸುಟ್ಟು ಭಸ್ಮವಾಗಿವೆ.
ಘಟನೆಯ ಮಾಹಿತಿ ಬಂದ ತಕ್ಷಣವೇ ಅಗ್ನಿಶಾಮಕ ದಳದ 7 ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದವು. ಸ್ಫೋಟದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಇದು ಭಯೋತ್ಪಾದಕ ಕೃತ್ಯ ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ಗಾಯಗೊಂಡವರನ್ನು ತಕ್ಷಣ ಲೋಕ್ ನಾಯಕ್ ಜೈ ಪ್ರಕಾಶ್ ನಾರಾಯಣ್ (ಎಲ್‌ಎನ್‌ಜೆಪಿ) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ 8 ಮಂದಿ ಸಾವನ್ನಪ್ಪಿರುವುದನ್ನು ದೃಢಪಡಿಸಲಾಗಿದೆ. ಘಟನೆಯ ನಂತರ ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಘಟನೆಯ ಬಗ್ಗೆ ಮಾಹಿತಿ ಪಡೆದು, ಕೂಡಲೇ ದೆಹಲಿ ಪೊಲೀಸ್ ಆಯುಕ್ತರು ಮತ್ತು ವಿಶೇಷ ಶಾಖೆಯ ಮುಖ್ಯಸ್ಥರೊಂದಿಗೆ ಮಾತನಾಡಿದರು. ಸ್ಫೋಟ ಸಂಭವಿಸಿದ 10 ನಿಮಿಷದೊಳಗೆ ದೆಹಲಿ ಕ್ರೈಂ ಬ್ರ್ಯಾಂಚ್, ಎನ್‌ಎಸ್‌ಜಿ, ಎನ್‌ಐಎ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಂಡಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿವೆ. ಎಲ್ಲಾ ಆಯಾಮಗಳಿಂದಲೂ ಸಂಪೂರ್ಣ ತನಿಖೆ ನಡೆಸುವಂತೆ ಗೃಹ ಸಚಿವರು ಆದೇಶಿಸಿದ್ದಾರೆ. ನಂತರ ಅಮಿತ್ ಶಾ ಅವರು ಗಾಯಾಳುಗಳನ್ನು ಭೇಟಿ ಮಾಡಲು ಎಲ್‌ಎನ್‌ಜೆಪಿ ಆಸ್ಪತ್ರೆಗೆ ಭೇಟಿ ನೀಡಿದರು.

