
ಅಣ್ಣಿಗೇರಿ: ಜೀವನದಲ್ಲಿ ಮನುಷ್ಯರನ್ನು ನಂಬಿ ಕೆಟ್ಟವರಿದ್ದಾರೆ, ಆದರೆ ಮಣ್ಣನ್ನು ನಂಬಿ ಕೆಟ್ಟವರಿಲ್ಲ. ಜೀವನ ಎಂದರೆ ಯಾವುದೇ ಡೊನೇಷನ್ ಇಲ್ಲದ ಪಾಠಶಾಲೆ, ಇದು ಸಮಾಜದ ಪ್ರತಿ ಕ್ಷಣಕ್ಕೂ ನಮಗೆ ಪಾಠವನ್ನು ಕಲಿಸುತ್ತದೆ ಎಂದು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಶಲವಡಿ ಗ್ರಾಮದ ಶ್ರೀ ಗುರುಶಾಂತೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ (ಕೆಪಿಎಸ್) ರವಿವಾರ 1995-96ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಗುರುವಂದನೆ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ಹುಟ್ಟು ಮತ್ತು ಸಾವು ನಮ್ಮ ಇಚ್ಛೆಯಂತೆ ನಡೆಯುವುದಿಲ್ಲ. ಆದರೆ ಇವುಗಳ ನಡುವಿನ ಬದುಕು ನಮ್ಮ ಕೈಯಲ್ಲಿದೆ. ಜೀವನದಲ್ಲಿ ಎದುರಾಗುವ ಕಷ್ಟ, ನೋವು, ಅವಮಾನಗಳನ್ನು ಮೆಟ್ಟಿ ನಿಲ್ಲುವುದೇ ನಿಜವಾದ ಜೀವನ. ಮನೆಯಲ್ಲಿ ದೀಪವಿಲ್ಲದಿದ್ದರೆ ಹೇಗೆ ಕತ್ತಲೋ, ಹಾಗೆಯೇ ಹೃದಯದಲ್ಲಿ ಅಕ್ಷರದ ಬೆಳಕಿಲ್ಲದಿದ್ದರೆ ಜೀವನ ಕತ್ತಲಾಗುತ್ತದೆ. ಗುರುಗಳು ಬಿತ್ತಿದ ಅಕ್ಷರದ ಬೀಜ ಎಂದು ವ್ಯರ್ಥವಾಗುವುದಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದು ಶಿಕ್ಷಣವಾದರೆ, ನಾಲ್ಕು ಜನರ ಮಧ್ಯೆ ಸಮಾಜದಲ್ಲಿ ಕಲಿಯುವುದು ಜೀವನ ಎಂದು ಶ್ರೀಗಳು ವಿಶ್ಲೇಷಿಸಿದರು.
ಅಲ್ಲದೆ, ಇಂದಿನ ಯುವ ಪೀಳಿಗೆ ಶರಣರು, ಸಂತರ ಸಹವಾಸ ಮಾಡಬೇಕು. ಪರರ ಮನಸ್ಸು ನೋಯಿಸದಂತೆ, ದ್ವೇಷದ ಕಿಡಿ ಹಚ್ಚದಂತೆ ಬದುಕಬೇಕು. ಊರಿನ ಹಿತಕ್ಕಾಗಿ ಪಕ್ಷಭೇದ ಮರೆತು ನೀವೆಲ್ಲರೂ ಒಂದಾಗಿ ಗುರುಗಳನ್ನು ಸತ್ಕರಿಸುತ್ತಿರುವುದು ಮತ್ತು ಊರನ್ನು ಶೃಂಗರಿಸಿರುವುದು ನೋಡಿದರೆ ಈ ಶಾಲೆ ಶಾಂತಿಯ ತೋಟದಂತೆ ಭಾಸವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಗುರುಗಳನ್ನು ಸ್ಮರಿಸುವ ಕಾರ್ಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಶಲವಡಿಯ ವಿದ್ಯಾರ್ಥಿಗಳು ಮಾಡಿರುವ ಕಾರ್ಯ ಶ್ಲಾಘನೀಯ ಎಂದರು. ಇದೇ ವೇಳೆ 1995-96ನೇ ಸಾಲಿನ ಸುಮಾರು 125ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ತಮಗೆ ವಿದ್ಯೆ ಧಾರೆ ಎರೆದ 30ಕ್ಕೂ ಹೆಚ್ಚು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು. ಅಲ್ಲದೆ, ಬಡ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘವನ್ನು (ಅಸೋಸಿಯೇಷನ್) ಉದ್ಘಾಟಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶಲವಡಿ ವಿರಕ್ತಮಠದ ಶ್ರೀ ಗುರುಶಾಂತೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಸಂಘದ ಕಾರ್ಯದರ್ಶಿ ರವೀಂದ್ರಬಾಬು ಅಂಗಡಿ, ಪ್ರಮುಖರಾದ ಶಂಭು ನಾಗಠಾಣ, ಗುರುಶಾಂತಗೌಡ ಪಾಟೀಲ್, ವೀರಣ್ಣ ಕುಲಕರ್ಣಿ, ಶಿವಾನಂದ ಹಳ್ಳಿ, ನಾಗಲಿಂಗ ಪತ್ತಾರ ಸೇರಿದಂತೆ ಶಲವಡಿ, ನಾಯ್ಕನೂರ, ಭೋಗಾನೂರ, ಖನ್ನೂರ ಗ್ರಾಮಗಳ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.
ವರದಿ .ಮಾಹಾಂತೇಶ ಹಕ್ಕರಕಿ.

