
ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಕರೆ; ಸಂವಿಧಾನ ನಮ್ಮ ದೇಶದ ಆತ್ಮ, ಪ್ರತಿಯೊಬ್ಬ ಪ್ರಜೆಯೂ ಅರಿತುಕೊಳ್ಳಬೇಕು
ಧಾರವಾಡ: ನವೆಂಬರ್ 26: ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಲಿಖಿತ ಸಂವಿಧಾನ ನಮ್ಮದಾಗಿದ್ದು, ಅದು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತಳಹದಿಯ ಮೇಲೆ ರಚನೆಯಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದರು.
ಅವರು ಬುದುವಾರದಂದು (ನ.26) ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಆಶಯಗಳನ್ನು ಅರಿತುಕೊಳ್ಳಬೇಕು. ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ ಎಂದು ಅವರು ತಿಳಿಸಿದರು. ನಮ್ಮ ಸಂವಿಧಾನವು ಕೇವಲ ಕಾನೂನಿನ ಪುಸ್ತಕವಲ್ಲ, ಅದು ನಮ್ಮ ದೇಶದ ಆತ್ಮವಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಜೊತೆಗೆ ಸಂವಿಧಾನ ವಿಧಿಸಿರುವ ಮೂಲಭೂತ ಕರ್ತವ್ಯಗಳನ್ನು ಪಾಲಿಸುವ ಜವಾಬ್ದಾರಿಯು ಎಲ್ಲರ ಮೇಲಿದೆ ಎಂದು ಹೊರಟ್ಟಿ ಅವರು ಹೇಳಿದರು.
ಅಂಬೇಡ್ಕರ್‌ರವರ ತಾಯಿ ಭೀಮಾಬಾಯಿ ತ್ಯಾಗ ಸ್ಮರಣೆ:
ಡಾ. ಬಿ.ಆರ್. ಅಂಬೇಡ್ಕರ್ ಅವರ ಹೋರಾಟ, ಶಿಕ್ಷಣ ಮತ್ತು ಸಾಧನೆಗಳು ನಮಗೆಲ್ಲರಿಗೂ ತಿಳಿದಿವೆ ಮತ್ತು ಸ್ಫೂರ್ತಿಯಾಗಿವೆ. ಆದರೆ, ಅಂಬೇಡ್ಕರ್ ಅವರಂತಹ ಮಹಾನ್ ಚೇತನವನ್ನು ಜಗತ್ತಿಗೆ ನೀಡಲು ಅವರ ತಾಯಿ ಭೀಮಾಬಾಯಿ ಅವರು ಪಟ್ಟ ಪಾಡು ಮತ್ತು ತ್ಯಾಗವನ್ನು ಇಂದು ನಾವು ಸ್ಮರಿಸಬೇಕು ಎಂದು ಹೊರಟ್ಟಿ ಅವರು ತಿಳಿಸಿದರು.
ಅಂಬೇಡ್ಕರ್ ಅವರಿಗೆ ಹುಬ್ಬಳ್ಳಿಯ ಸರ್ ಸಿದ್ದಪ್ಪ ಕಂಬಳಿಯವರು ನೆರವು ನೀಡಿದ್ದ ಐತಿಹಾಸಿಕ ಘಟನೆಯನ್ನು ಸ್ಮರಿಸಿದ ಅವರು, ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕ ಹುದ್ದೆಗೆ ಅಂಬೇಡ್ಕರ್ ಅವರ ಅಗಾಧ ಕಾನೂನು ಜ್ಞಾನ ಮತ್ತು ವಿದ್ವತ್ತನ್ನು ಗುರುತಿಸಿ, ಆಗಿನ ಆಡಳಿತ ವರ್ಗ ಮತ್ತು ಮೇಲ್ವರ್ಗದವರ ತೀವ್ರ ವಿರೋಧದ ನಡುವೆಯೂ ತಮ್ಮ ಅಧಿಕಾರ ಬಳಸಿ ಜೂನ್ 1928 ರಲ್ಲಿ ಅವರನ್ನು ನೇಮಕ ಮಾಡಿದ್ದರು. ಇದು ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದ ವಿಮೋಚಕ ಡಾ. ಬಿ.ಆರ್. ಅಂಬೇಡ್ಕರ್:
ಶಾಸಕರಾದ ಎನ್.ಎಚ್. ಕೋನರೆಡ್ಡಿ ಅವರು ಮಾತನಾಡಿ, ಡಾ. ಅಂಬೇಡ್ಕರ್ ಅವರು ಇಲ್ಲದೇ ಹೋಗಿದ್ದರೆ, ಇಂದು ಸಮಾಜದ ಜನರು ಗ್ರಾಮ ಪಂಚಾಯತ್ ಸದಸ್ಯರಾಗಲಿ ಅಥವಾ ಶಾಸಕರಾಗಲಿ ಆಗಲು ಸಾಧ್ಯವಿರುತ್ತಿರಲಿಲ್ಲ. ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ, ಇಡೀ ಮನುಕುಲದ ವಿಮೋಚಕರು. ಅವರ ವೈಚಾರಿಕ ನಿಲುವುಗಳು ಮತ್ತು ಸಮಾನತೆಯ ತತ್ವಗಳನ್ನು ಅಳವಡಿಸಿಕೊಂಡರೆ ಮಾತ್ರ ನಾವು ನಿಜವಾದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ರಾಷ್ಟ್ರವನ್ನು ಕಟ್ಟಲು ಸಾಧ್ಯ ಎಂದು ಹೇಳಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಅಂಬೇಡ್ಕರ್ ಅವರು ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೇ ಜ್ಞಾನದ ಸಂಕೇತವಾಗಿದ್ದಾರೆ. ಲಂಡನ್ನಿನ ಪ್ರತಿಷ್ಠಿತ ಗ್ರಂಥಾಲಯದಲ್ಲಿ ಅವರ ಪುತ್ಥಳಿ ಸ್ಥಾಪಿಸಿರುವುದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ವಿಚಾರವಾಗಿದೆ. ಅಂಬೇಡ್ಕರ್ ಅವರು ತಮ್ಮ ಉಡುಪಿನ ಮೂಲಕ, ಜಾತಿ ಪದ್ಧತಿ ತೀವ್ರವಾಗಿದ್ದ ಕಾಲದಲ್ಲಿ, “ವಿದ್ಯೆ ಮತ್ತು ಬುದ್ಧಿವಂತಿಕೆಯಲ್ಲಿ ನಾವೂ ಕಡಿಮೆಯಿಲ್ಲ” ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದರು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ವಿದ್ಯಾರ್ಥಿಗಳು ಸಂವಿಧಾನವನ್ನು ಓದುವುದು ಮತ್ತು ಅರ್ಥಮಾಡಿಕೊಳ್ಳುವುದು ಅವಶ್ಯ ಎಂದು ಅವರು ಹೇಳಿದರು.
ಸಂವಿಧಾನ ಜಾಗೃತಿ ಜಾಥಾ:
ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಕರ್ನಾಟಕ ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯ ಸಂಚೇತಕರಾದ ಸಲೀಂ ಅಹ್ಮದ ಅವರು ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಮೆರವಣಿಗೆಯು ಕೋರ್ಟ್ ಸರ್ಕಲ್, ಆಲೂರು ವೆಂಕಟರಾವ್ ವೃತ್ತ (ಜುಬ್ಲಿ ಸರ್ಕಲ್) ಮಾರ್ಗವಾಗಿ ಡಾ. ಪಾಟೀಲ ಪುಟ್ಟಪ್ಪ ಸಭಾಭವನದವರೆಗೆ ಜರುಗಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಕೆ.ಯು.ಎಸ್.ಕೆ. ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಮಂಜುಳಾ ಎಸ್.ಆರ್., ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭಾ ಅವರು ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.

