
ಧಾರವಾಡ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ, ಧಾರವಾಡ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಭಿಯೋಜನೆ ಇಲಾಖೆ ಹಾಗೂ ಧಾರವಾಡ ವಕೀಲರ ಸಂಘದ ಸಹಯೋಗದಲ್ಲಿ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಬುದುವಾರದಂದು (ನವೆಂಬರ್ 26) ನಡೆದ ಸಂವಿಧಾನ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತದ ಸಂವಿಧಾನವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಲಿಖಿತ ಸಂವಿಧಾನವಾಗಿದೆ. ಸಂವಿಧಾನದ ಸಂಪೂರ್ಣ ಅರ್ಥವು ಅದರ ಪೀಠಿಕೆಯಲ್ಲಿ ಅಡಗಿದ್ದು, ಭಾರತದ ಪ್ರತಿಯೊಬ್ಬ ನಾಗರಿಕನು ಸಂವಿಧಾನದ ಪೀಠಿಕೆಯನ್ನು ಅರಿತುಕೊಳ್ಳುವುದು ಅತ್ಯಗತ್ಯ. ಅಲ್ಲದೆ, ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳೊಂದಿಗೆ ಪ್ರತಿಯೊಬ್ಬರೂ ತಮ್ಮ ಮೂಲಭೂತ ಕರ್ತವ್ಯಗಳನ್ನು ಪಾಲಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷರು ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುವರ್ಣಾ ಕೆ. ಮಿರ್ಜಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನಾಗರಾಜಪ್ಪ ಎ.ಕೆ., ರಾಜಕುಮಾರ ಸಿ, ಜರೀನಾ, ಪೂರ್ಣಿಮಾ ಭಂಡಾರಕರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ ಎಫ್. ದೊಡ್ಡಮನಿ, ಧಾರವಾಡ ವಕೀಲರ ಸಂಘದ ಅಧ್ಯಕ್ಷರಾದ ಅಶೋಕ ವಿ. ಏಣಗಿ ಮತ್ತು ಸರ್ಕಾರಿ ಅಭಿಯೋಜಕಿ ಶೈಲಾ ಅಂಗಡಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ನಗರದ ನ್ಯಾಯಾಧೀಶರು, ವಕೀಲರ ಸಂಘದ ಸದಸ್ಯರು, ಜಿಲ್ಲಾ ನ್ಯಾಯಾಲಯದ ಸಿಬ್ಬಂದಿ, ಅಭಿಯೋಜನೆ ಇಲಾಖೆಯ ಸಿಬ್ಬಂದಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ವರ್ಗದವರು ಹಾಜರಿದ್ದು, ಸಂವಿಧಾನದ ಮಹತ್ವ ಮತ್ತು ಕಾನೂನು ಅರಿವಿನ ಬಗ್ಗೆ ಮಾಹಿತಿ ಪಡೆದರು.

