ಕುಂದಗೋಳ: ಕಡಲೆ ಖರೀದಿ ಕೇಂದ್ರ ಆರಂಭಿಸಿ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ತಹಶೀಲ್ದಾರ ರಾಜು ಮಾವರಕರಿಗೆ ರೈತರ ಮನವಿ

Spread the love

ಕುಂದಗೋಳ: ತಾಲೂಕಿನಾದ್ಯಂತ ಸತತ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ಕಡಲೆ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಿ ತಕ್ಷಣವೇ ಎಂ.ಎಸ್.ಪಿ (MSP) ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿ ಕುಂದಗೋಳ ಬೆಳೆ ರಕ್ಷಕ ರೈತ ಸಂಘದ ವತಿಯಿಂದ ತಹಶೀಲ್ದಾರ್ ರಾಜು ಮಾವರಕರ ಅವರಿಗೆ ಮನವಿ ಸಲ್ಲಿಸಲಾಯಿತು.

ಕಳೆದ 4–5 ವರ್ಷಗಳಿಂದ ಪ್ರಕೃತಿ ವಿಕೋಪ ಹಾಗೂ ಅತಿವೃಷ್ಟಿಯಿಂದ ತಾಲೂಕಿನ ರೈತರು ತತ್ತರಿಸಿ ಹೋಗಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ, ಗೊಬ್ಬರ ಹಾಗೂ ಕ್ರಿಮಿನಾಶಕಕ್ಕಾಗಿ ಸಾಲಸೋಲ ಮಾಡಿ ಹಾಕಿದ್ದ ಬಂಡವಾಳವೂ ಕೈಗೆ ಬರದಂತಾಗಿದೆ. ಪರಿಣಾಮ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಈ ಕೂಡಲೇ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿರುವ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಅಲ್ಲದೆ, ಹೊಸದಾಗಿ ಬೆಳೆಸಾಲ ಪಡೆಯಲು ಬ್ಯಾಂಕುಗಳು ಸಿಬಿಲ್ ಸ್ಕೋರ್ (CIBIL Score) ನೋಡುವುದನ್ನು ಕೈಬಿಟ್ಟು ರೈತರಿಗೆ ವಿನಾಯಿತಿ ನೀಡಬೇಕು ಎಂದು ರೈತರು ಒತ್ತಾಯಿಸಿದರು.

ಇದೇ ವೇಳೆ ಕಡಲೆ ಖರೀದಿ ಪ್ರಕ್ರಿಯೆಯಲ್ಲಿನ ತಾಂತ್ರಿಕ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ರೈತ ಮುಖಂಡರು, ಖರೀದಿ ನೀಡುವ ಸಮಯದಲ್ಲಿ ಮಾತ್ರ ಬಯೋಮೆಟ್ರಿಕ್ ಪಡೆದುಕೊಳ್ಳಬೇಕು, ಬಿಲ್ ಪಾವತಿ ವೇಳೆ ಅದನ್ನು ಕಡ್ಡಾಯಗೊಳಿಸಬಾರದು ಎಂದು ಮನವಿ ಮಾಡಿದರು.

ಪ್ರತಿ ಎಕರೆಗೆ 10 ಕ್ವಿಂಟಲ್ ಹಾಗೂ 5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರಿಗೆ ಕನಿಷ್ಠ 50 ಕ್ವಿಂಟಲ್ ಕಡಲೆ ಖರೀದಿಸಬೇಕು. ಮಾರಾಟ ಮಾಡಿದ ಮಾಲಿನ ಹಣವನ್ನು ರೈತರ ಖಾತೆಗೆ ಒಂದು ವಾರದೊಳಗೆ ಜಮೆ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಕುಂದಗೋಳ ಬೆಳೆ ರಕ್ಷಕ ರೈತ ಸಂಘದ ಅಧ್ಯಕ್ಷರಾದ ಶ್ರೀ ಸೋಮರಾವ್ ಆರ್. ದೇಸಾಯಿ ಹಾಗೂ ರೈತ ಮುಖಂಡರಾದ ನಾಗರಾಜ ದೇಶಪಾಂಡೆ ಮಾತನಾಡಿ, “ಈ ಬೇಡಿಕೆಗಳ ಕುರಿತು ನಾವು ಈಗಾಗಲೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಎಂ.ಆರ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದೇವೆ. ಅದರಂತೆ ಇಂದು ತಹಶೀಲ್ದಾರ್ ರಾಜು ಮಾವರಕರ ಅವರಿಗೂ ಮನವಿ ನೀಡಲಾಗಿದ್ದು, ಇದನ್ನು ಕೂಡಲೇ ಸರ್ಕಾರಕ್ಕೆ ತಲುಪಿಸಿ ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಬೇಕು” ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಮುಂಖಡರಾದ ಸಿದ್ದಪ್ಪ ಇಂಗಳಳ್ಳಿ, ಲಕ್ಷ್ಮಣ ಚುಳಕಿ, ಮಲ್ಲೇಶ ಅವಾರಿ, ಮಲ್ಲಪ್ಪ ತಡಸದ, ರುದ್ರಪ್ಪ ಕಿರೇಸೂರ, ಶಿವಲಿಂಗಪ್ಪ ಸವಣೂರ, ಲಕ್ಷ್ಮಣ ರಂಗನಾಯ್ಕರ, ಮಂಜು ಯಲಿಗಾರ, ಪರಶುರಾಮ ಕಲಾಲ, ಶಂಕರಗೌಡ ದೊಡ್ಡಮನಿ, ಪರಮೇಶಿ ಕಿರೆಸೂರ, ರಾಮಣ್ಣ ಮುದೆಣ್ಣವರ, ಕಲ್ಲಪ್ಪ ಹರಕುಣಿ, ಬಸವರಾಜ ಬ್ಯಾಹಟ್ಟಿ, ದೇವಪ್ಪ ಇಚ್ಚಂಗಿ, ರಾಜೇಸಾಬ ಕಳ್ಳಿಮನಿ, ಕಲ್ಲಪ್ಪ ಉಗರಗೋಳ, ಎನ್ ಎಮ್ ಮುಗಳಿ, ಸೋಮಣ್ಣ ಕುಂಬಾರ, ಸೇರಿದಂತೆ ಅನೇಕ ರೈತರು ಬಾಗವಹಿಸಿದ್ದರು.

Leave a Reply

Your email address will not be published. Required fields are marked *