ಇಚ್ಛಾಮರಣಕ್ಕೆ ಮುಂದಾಗಿದ್ದ ಕುಬಿಹಾಳ ಗ್ರಾಮದ ಯುವಕನಿಂದ ದಾಖಲೆ ಸಲ್ಲಿಕೆ ವಿಫಲ: ಸುಳ್ಳು ಆರೋಪ ಮಾಡದಂತೆ ನ್ಯಾಯಾಧೀಶರ ಎಚ್ಚರಿಕೆ

Spread the love

ಕುಂದಗೋಳ : ತಾಲೂಕಿನ ಕುಬಿಹಾಳ ಗ್ರಾಮ ಪಂಚಾಯತಿ ಸೇರಿದಂತೆ ಒಟ್ಟು 26 ಪಂಚಾಯತಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ರಾಷ್ಟ್ರಪತಿಗಳಿಗೆ ಪತ್ರ ಬರೆದು ಇಚ್ಛಾಮರಣಕ್ಕೆ ಮುಂದಾಗಿದ್ದ ಯುವಕ ನಾಗರಾಜ ಗುರುಶಿದ್ದಪ್ಪ ಹುಬ್ಬಳ್ಳಿ, ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನೇತೃತ್ವದಲ್ಲಿ ನಡೆದ ವಿಚಾರಣೆಯ ವೇಳೆ ಸೂಕ್ತ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾದರು.

ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದ ನಾಗರಾಜ, ಈ ಬಗ್ಗೆ ಅನುದಾನ ತಡೆಹಿಡಿಯುವಂತೆ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಕಚೇರಿಗೆ ದೂರು ಸಲ್ಲಿಸಿದ್ದರು. ಅಲ್ಲದೆ, ಜನವರಿ 9 ರಂದು ಕುಬಿಹಾಳ ಗ್ರಾಮ ಪಂಚಾಯತಿ ಎದುರು ಇಚ್ಛಾಮರಣ ಹೊಂದುವುದಾಗಿ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮಾನಸಿಕ ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಶುಕ್ರವಾರದಂದು ಕುಬಿಹಾಳದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಅವರ ನೇತೃತ್ವದಲ್ಲಿ ಸಾರ್ವಜನಿಕ ವಿಚಾರಣೆ ನಡೆಸಲಾಯಿತು. ಆದರೆ, ಭ್ರಷ್ಟಾಚಾರದ ಕುರಿತು ಸಾಕ್ಷ್ಯ ನುಡಿಯುವಾಗ ತಮ್ಮ ಆರೋಪಗಳನ್ನು ಪುಷ್ಟೀಕರಿಸಲು ಅಗತ್ಯವಾದ ಯಾವುದೇ ದಾಖಲೆಗಳನ್ನು ಹಾಜರುಪಡಿಸಲು ಅರ್ಜಿದಾರ ನಾಗರಾಜ ಅಶಕ್ತರಾದರು.

ಈ ಸಂದರ್ಭದಲ್ಲಿ ಮಾತನಾಡಿದ ಗೌರವಾನ್ವಿತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು, ದಾಖಲೆಗಳಿಲ್ಲದೆ ಕೇವಲ ಊಹಾಪೋಹಗಳ ಆಧಾರದ ಮೇಲೆ ಅಧಿಕಾರಿಗಳ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಯುವಕನಿಗೆ ಕಿವಿಮಾತು ಹೇಳಿದರು. ಯಾವುದೇ ಆರೋಪ ಮಾಡುವುದಿದ್ದರೂ ಮಾಹಿತಿ ಹಕ್ಕು ಕಾಯ್ದೆಯಡಿ (RTI) ಅಧಿಕೃತ ದಾಖಲೆಗಳನ್ನು ಸಂಗ್ರಹಿಸಿ ಮಾತನಾಡಬೇಕು. ಸುಳ್ಳು ಆರೋಪಗಳನ್ನು ಮಾಡಿದರೆ ಮರಳಿ ದೂರುದಾರರ ಮೇಲೆಯೇ ಮಾನನಷ್ಟ ಅಥವಾ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗುವ ಸಾಧ್ಯತೆಯಿರುತ್ತದೆ. ದೇಶದಲ್ಲಿರುವ ಸಮಸ್ಯೆಗಳಿಗೆ ಆತ್ಮಹತ್ಯೆ ಅಥವಾ ಇಚ್ಛಾಮರಣ ಪರಿಹಾರವಲ್ಲ, ಕಾನೂನಾತ್ಮಕ ಹೋರಾಟವೇ ಏಕೈಕ ಮಾರ್ಗ ಎಂದು ಬುದ್ಧಿಮಾತು ಹೇಳಿದರು.

ಇದೇ ವೇಳೆ ನಡೆದ ಸಾರ್ವಜನಿಕ ಸಭೆಯಲ್ಲಿ ಗ್ರಾಮಸ್ಥರು ಊರಿನ ಸಮಸ್ಯೆಗಳ ಸರಮಾಲೆಯನ್ನೇ ನ್ಯಾಯಾಧೀಶರ ಮುಂದಿಟ್ಟರು. ಪ್ರಮುಖವಾಗಿ ವ್ಹಾಲಿಬಾಲ್ ಕ್ರೀಡಾಂಗಣದ ಬೇಡಿಕೆ, ರಸ್ತೆ ಅಭಿವೃದ್ಧಿ, ಚರಂಡಿ ಸ್ವಚ್ಛತೆ, ನವಗ್ರಾಮ ನಿವೇಶನ ಹಂಚಿಕೆ ಹಾಗೂ ಕುಡಿಯುವ ನೀರು ಪೋಲಾಗುತ್ತಿರುವ ವಿಷಯಗಳು ಚರ್ಚೆಗೆ ಬಂದವು.

ಸಮಸ್ಯೆಗಳನ್ನು ಆಲಿಸಿದ ಉಭಯ ನ್ಯಾಯಾಧೀಶರು, ಸ್ಥಳದಲ್ಲಿದ್ದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್ ಅವರಿಗೆ ಖಡಕ್ ಸೂಚನೆ ನೀಡಿ, ಮುಂದಿನ 7 ದಿನಗಳ ಒಳಗಾಗಿ ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದರು.

ಸರ್ಕಾರಿ ಅಧಿಕಾರಿಗಳು ತಮ್ಮ ಕೆಲಸವನ್ನು ದೇವರ ಕೆಲಸವೆಂದು ಭಾವಿಸಿ ಪ್ರಾಮಾಣಿಕವಾಗಿ ನಿರ್ವಹಿಸಬೇಕು, ಸಾರ್ವಜನಿಕರ ದೂರುಗಳನ್ನು ನಿರ್ಲಕ್ಷಿಸಬಾರದು ಮತ್ತು ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿಗಳ ವಿವರವಾದ ಬೋರ್ಡ್ ಹಾಕಿ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದು ನ್ಯಾಯಾಧೀಶರು ಅಧಿಕಾರಿಗಳಿಗೆ ತಾಕೀತು ಮಾಡಿದರು. ಇದೇ ವೇಳೆ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಸಾರ್ವಜನಿಕರು ಗ್ರಾಮ ಪಂಚಾಯತಿ ತೆರಿಗೆಗಳನ್ನು ಸಕಾಲದಲ್ಲಿ ಪಾವತಿಸಬೇಕೆಂದು ಜಾಗೃತಿ ಮೂಡಿಸಲಾಯಿತು.

ವಿಚಾರಣೆಯಲ್ಲಿ ಜಿ ಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಭಾಗಿ, ಜಿ ಪಂ ಯೋಜನಾಧಿಕಾರಿ ಪ್ರದೀಪ ಮಡಿವಾಳರ, ತಹಶೀಲ್ದಾರ್ ರಾಜು ಮಾವರಕರ, ತಾ ಪಂ ಇಒ ಜಗದೀಶ್ ಕಮ್ಮಾರ, ಸಿ ಪಿ ಐ ಸಮೀರ ಮುಲ್ಲಾ, ಪಿ ಎಸ್ ಐ ಇಮ್ರಾನ್ ಪಠಾಣ, ಹಾಗೂ ಕುಬಿಹಾಳ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು ಪಿಡಿಒಗಳು, ಪೊಲೀಸ್ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *