ಧಾರವಾಡ: ನಾಡಿನ ಹೆಮ್ಮೆಯ ಸಂಸ್ಥೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ಕರ್ನಾಟಕ ರಾಜ್ಯೋತ್ಸವ ನಾಡಹಬ್ಬ-2025ರ ಅಂಗವಾಗಿ ನವೆಂಬರ್ 1 ರಿಂದ 30ರವರೆಗೆ ಒಂದು ತಿಂಗಳ ಪೂರ್ಣ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಭಾಗವಾಗಿ, ದಿನಾಂಕ ನವೆಂಬರ್ 19, 2025 ರಂದು ಬೆಳಿಗ್ಗೆ 11 ಗಂಟೆಗೆ ‘ಧರೆಗೆ ದೊಡ್ಡವರು’ ಎಂಬ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ಧಾರವಾಡದ ಮೋಡಿಲಿಪಿ ತಜ್ಞರು ಮತ್ತು ವಿದ್ವಾಂಸರಾದ ಪ್ರೊ. ಎಂ.ವಾಯ್. ಸಾವಂತ ಅವರು ‘ಧರೆಗೆ ದೊಡ್ಡವ’ರಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಂಶೋಧಕರಾದ ಡಾ. ಬಾಳಪ್ಪ ಈರಪ್ಪ ಚಿನಗುಡಿ ಅವರು, ಪ್ರೊ. ಎಂ. ವಾಯ್. ಸಾವಂತ ಅವರ ಬದುಕು ಮತ್ತು ಬರಹಗಳ ಕುರಿತು ಮಾತನಾಡಲಿದ್ದಾರೆ. ಕಿಟೆಲ್ ಮಹಾವಿದ್ಯಾಲಯದ ಸುಮಾರು 300 ವಿದ್ಯಾರ್ಥಿಗಳು ಈ ‘ಚರ್ಚೆ-ಸಂವಾದ’ದಲ್ಲಿ ಭಾಗವಹಿಸಲಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಈ ಕುರಿತು ಪ್ರಕಟಣೆ ನೀಡಿದ್ದು, ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದ್ದಾರೆ.

