
📰 ಕನ್ನಡಿಗರು ಅಭಿಮಾನ ಶೂನ್ಯರಾಗದೇ ಕನ್ನಡ ಸಂಸ್ಕೃತಿ ಬಗ್ಗೆ ನಿರಂತರ ಜಾಗೃತಿ ಹೊಂದಬೇಕು: ಡಾ. ವೀರಣ್ಣ ರಾಜೂರ
ಧಾರವಾಡ: ಕನ್ನಡಿಗರು ಅಭಿಮಾನ ಶೂನ್ಯರಾಗದೇ, ಕನ್ನಡ ಸಂಸ್ಕೃತಿಯ ಬಗ್ಗೆ ನಿರಂತರ ಜಾಗೃತಿ ಮತ್ತು ಅಭಿಮಾನ ಹೊಂದಬೇಕೆಂದು ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾದ ಡಾ. ವೀರಣ್ಣ ರಾಜೂರ ಅವರು ಕರೆ ನೀಡಿದರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶನಿವಾರದಂದು ಆಯೋಜಿಸಿದ್ದ, ಸಂಘದ ಪ್ರಸಕ್ತ ತ್ರೈವಾರ್ಷಿಕ ಸಾಲಿನ ಗೌರವ ಉಪಾಧ್ಯಕ್ಷರಾಗಿ ನೇಮಕಗೊಂಡ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಏಕೀಕರಣದ ಹೋರಾಟಗಾರರ ತ್ಯಾಗ ಸ್ಮರಣೆ:
“ಇಂದು ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಪ್ರಾತಃಸ್ಮರಣೀಯರ ತ್ಯಾಗ ಮತ್ತು ಸೇವೆಯನ್ನು ಸ್ಮರಿಸುವ ಮಹಾ ಸುದಿನವಾಗಿದೆ. ಯುವ ಜನಾಂಗ ಕನ್ನಡದ ಪ್ರಜ್ಞೆಯನ್ನು ಹೊಂದಬೇಕು. ಕರ್ನಾಟಕ ವಿದ್ಯಾವರ್ಧಕ ಸಂಘವು ೧೩೬ ವರ್ಷಗಳಿಂದ ಭಾಷೆ, ನೆಲ ಮತ್ತು ಜಲಕ್ಕೆ ಅನ್ಯಾಯವಾದಾಗ ಗಟ್ಟಿ ಧ್ವನಿಯಾಗಿ ನೂರಾರು ಹೋರಾಟಗಳಿಗೆ ಸಾಕ್ಷಿಯಾಗಿದೆ. ರಾಜ್ಯೋತ್ಸವ ನವೆಂಬರ್ ೧ಕ್ಕೆ ಮಾತ್ರ ಸೀಮಿತವಾಗದೇ, ಕವಿವ ಸಂಘವು ನಿರಂತರವಾಗಿ ಕಾರ್ಯಕ್ರಮ ಮಾಡುವಂತಾಗಲಿ,” ಎಂದು ಅವರು ಹಾರೈಸಿದರು.
ಕವಿವ ಸಂಘದ ಮಹತ್ವ:
ಕವಿವ ಸಂಘದ ಕಾರ್ಯಾಧ್ಯಕ್ಷರಾದ ಬಸವಪ್ರಭು ಹೊಸಕೇರಿ ಮಾತನಾಡಿ, “ಇಡೀ ಭಾರತದಲ್ಲಿ ಕವಿವ ಸಂಘವು ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಕನ್ನಡವನ್ನು ಉಳಿಸಿ-ಬೆಳೆಸಲು ಕಿಟೆಲ್ರಂತಹ ವಿದೇಶಿಯರ ಸೇವೆ ದೊಡ್ಡದು. ಆಂಗ್ಲ ಭಾಷೆ ನಮಗೆ ಭಾಷೆಯಾಗಿ ಇರಲಿ, ಆದರೆ ಅದೇ ಸಂಸ್ಕೃತಿಯಾಗಬಾರದು. ಕನ್ನಡ ಬೇಕು ಅನ್ನುವುದು ನಮ್ಮ ಹೃದಯಕ್ಕೆ ತಿಳಿಯಬೇಕು,” ಎಂದರು.
ಗೌರವ ಉಪಾಧ್ಯಕ್ಷರ ಅಭಿಪ್ರಾಯ:
ಕವಿವ ಸಂಘದ ಗೌರವ ಉಪಾಧ್ಯಕ್ಷರಾಗಿ ನೇಮಕಗೊಂಡ ಡಾ. ಪಾಂಡುರಂಗ ಪಾಟೀಲ, ಶ್ರೀನಿವಾಸ ವಾಡಪ್ಪಿ, ಡಾ. ಅಜಿತ ಪ್ರಸಾದ ಹಾಗೂ ಕೆ. ಬಿ. ನಾವಲಗಿಮಠ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅವರು ಹೇಳಿದರು — “ಕನ್ನಡದ ಮೇಲೆ ಅನೇಕ ವರ್ಷಗಳಿಂದ ದಾಳಿ ಮತ್ತು ಆಕ್ರಮಣ ನಡೆದರೂ, ಕನ್ನಡವು ತನ್ನ ಅಂತಃಸತ್ವವನ್ನು ಕಳೆದುಕೊಂಡಿಲ್ಲ. ಇನ್ನು ಕನ್ನಡ ಶ್ರೀಮಂತ ಮತ್ತು ಸಮೃದ್ಧವಾಗಿರುವುದೇ ನಮ್ಮ ಹೃದಯ ಶ್ರೀಮಂತಿಕೆಗೆ ಸಾಕ್ಷಿ. ಕವಿವ ಸಂಘದ ಚಟುವಟಿಕೆಗಳು ಪ್ರಪಂಚದಾದ್ಯಂತ ವಿಸ್ತೃತವಾಗಲು ಸಾಮಾಜಿಕ ಜಾಲತಾಣದ ಅವಲಂಬನೆ ಅಗತ್ಯ. ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟಿಗೂ ಸಂಘವೇ ಕಾರಣವಾಗಿದೆ. ತಮಿಳರಿಗೆ, ಬಂಗಾಲದವರಿಗಿರುವಷ್ಟು ಭಾಷಾ ಅಭಿಮಾನ ನಮ್ಮಲ್ಲಿರದಿರುವುದು ವಿಷಾದನೀಯ. ಕನ್ನಡದಲ್ಲಿ ಹೇಳಿಕೊಳ್ಳುವಂತಹ ಕಾನೂನು ಪುಸ್ತಕ ನಮ್ಮಲ್ಲಿಲ್ಲ. ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಗಳಲ್ಲಿ ಆಂಗ್ಲ ಮಾಧ್ಯಮದ ಜೊತೆ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳೇ ಅಧಿಕ,” ಎಂದು ಅವರು ತಿಳಿಸಿದರು.
ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯಿಂದ ಕೊಡಮಾಡಲ್ಪಡುವ ರಾಜ್ಯೋತ್ಸವ ಧೀಮಂತ ಪ್ರಶಸ್ತಿಗೆ ಆಯ್ಕೆಯಾದ ಪ್ರೊ. ಧನವಂತ ಹಾಜವಗೋಳ, ಪ್ರೊ. ಶಶಿಧರ ತೋಡಕರ ಹಾಗೂ ಮಹಾವೀರ ಉಪಾಧ್ಯೆಯವರನ್ನು ಸಂಘದ ಪರವಾಗಿ ಗೌರವಿಸಲಾಯಿತು.
ಸ್ನೇಹರಂಗ ಕಲಾ ಬಳಗದವರು ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು. ಶಂಕರ ಕುಂಬಿ ಸ್ವಾಗತಿಸಿದರು, ಶಂಕರ ಹಲಗತ್ತಿ ನಿರೂಪಿಸಿದರು ಮತ್ತು ಸತೀಶ ತುರಮರಿ ವಂದಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಭಾವಿಕಟ್ಟಿ, ಡಾ. ಶೈಲಜಾ ತ. ಅಮರಶೆಟ್ಟಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ವಿಶ್ವೇಶ್ವರಿ ಬಿ. ಹಿರೇಮಠ, ಡಾ. ಮಹೇಶ ಧ. ಹೊರಕೇರಿ ಹಾಗೂ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

