ಕನ್ನಡ ಅತ್ಯಂತ ಸುಂದರ ಭಾಷೆ, ಮಾತೃಭಾಷೆಗೆ ಮೊದಲ ಆದ್ಯತೆ ನೀಡಿ: ಡಾ. ರೇಣುಕಾ ಅಮಲಝರಿ ಕರೆ

Spread the love

ಧಾರವಾಡ, ನ. 21: “ಭಾರತೀಯ ಭಾಷೆಗಳಲ್ಲಿ ಬರೆಯಲು, ಓದಲು, ಮಾತನಾಡಲು ಅತ್ಯಂತ ಸುಂದರವಾದ ಭಾಷೆ ಕನ್ನಡ ಮಾತ್ರ. ಕನ್ನಡ ನುಡಿ ಕನ್ನಡಿಗರಾಡುವ ಕಸ್ತೂರಿ ಕನ್ನಡ ಭಾಷೆ. ಇದು ಕಸ್ತೂರಿಯಷ್ಟೇ ಪರಿಮಳಯುಕ್ತವಾದದ್ದು” ಎಂದು ಡಾ. ರೇಣುಕಾ ಅಮಲಝರಿ ಅವರು ಹೇಳಿದರು. ಶುಕ್ರವಾರದಂದು ಕರ್ನಾಟಕ ವಿದ್ಯಾವರ್ಧಕ ಸಂಘವು (ಕವಿವ ಸಂಘ) ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಧಕರ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

​ಕವಿವ ಸಂಘವು 136 ವರ್ಷಗಳಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿ ಉಳಿಸುವಂತಹ ಮಹತ್ವದ ಕಾರ್ಯ ಮಾಡುತ್ತಿದೆ. ಕನ್ನಡ ಕಟ್ಟುವ ಕಾರ್ಯದಲ್ಲಿ ಅನೇಕ ಮಹನೀಯರ ಜೊತೆ ಕವಿವ ಸಂಘದ್ದು ಪ್ರಧಾನ ಪಾತ್ರವಿದೆ. ನಾವು ಯಾವುದೇ ಭಾಷೆಯನ್ನು ಕಲಿಯಲು ಅಡ್ಡಿ ಇಲ್ಲ. ಆದರೆ, ಮಾತೃಭಾಷೆ ಕನ್ನಡಕ್ಕೆ ಮಾತ್ರ ನಾವು ಮೊದಲ ಆದ್ಯತೆಯನ್ನು ನೀಡಬೇಕು. ಭಾಷೆಗೆ ಯಾವುದೇ ಜಾತಿ ಇಲ್ಲ. ಭಾಷೆಯ ಸಂವರ್ಧನೆಗಾಗಿ ನಾವೆಲ್ಲರೂ ಬದ್ಧತೆಯಿಂದ ಕಟ್ಟಾಳಾಗಿ ಕಾರ್ಯ ಮಾಡಬೇಕೆಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

​ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರವೀಂದ್ರ ಕೋರಿಶೆಟ್ಟರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, “ನಾನು ಇತಿಹಾಸದ ಸಂಶೋಧನೆಯಲ್ಲಿ ಸಮಾಜಮುಖಿಯಾಗಿ ಕಾರ್ಯ ಮಾಡಿದ್ದರಿಂದ ಸರ್ಕಾರ ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು ಅಭಿಮಾನದ ಸಂಗತಿಯಾಗಿದೆ. ನನ್ನ ತವರು ನಾಡಿನಲ್ಲಿ ಸಿಕ್ಕ ಈ ಗೌರವ ದೊಡ್ಡದು” ಎಂದರು. ಪ್ರಾಕ್ತನ ಇತಿಹಾಸ ಸಂಶೋಧನಾ ಕಾರ್ಯ ತುಂಬಾ ಕಠಿಣವಾಗಿದೆ. ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಇತಿಹಾಸದ ಕಾಲ ಗರ್ಭದಲ್ಲಿ ಹುದುಗಿ ಹೋದ ನೆಲೆಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ಉತ್ಖನನ ಮಾಡಿ, ಅಲ್ಲಿ ಸಿಗುವ ಪುರಾತತ್ವ ವಸ್ತುಗಳ ಆಧಾರದ ಮೇಲೆ ಆ ಪರಿಸರದ ಸಾಮಾಜಿಕ, ಆರ್ಥಿಕ ಸ್ಥಿತಿ, ಜನ ಜೀವನವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾಗುತ್ತದೆ ಎಂದು ಅವರು ತಮ್ಮ ಕಾರ್ಯದ ಮಹತ್ವವನ್ನು ವಿವರಿಸಿದರು.

​ಕಾರ್ಯಕ್ರಮದ ವೇದಿಕೆ ಮೇಲೆ ಕವಿವ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಮತ್ತು ಬಾಬಾಜಾನ್ ಮುಲ್ಲಾ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮುಕ್ತಾ ಕುಲಕರ್ಣಿ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು. ನಂತರ ನವರಸ ಸ್ನೇಹಿತರ ವೇದಿಕೆಯಿಂದ ನಾಡು-ನುಡಿ ಹಾಡುಗಳು ಪ್ರೇಕ್ಷಕರನ್ನು ರಂಜಿಸಿದವು. ಕೊನೆಯಲ್ಲಿ ಅನುಶ್ರೀ ಶೆಟ್ಟಿ ತಂಡದಿಂದ ಭರತನಾಟ್ಯ ಪ್ರದರ್ಶನಗೊಂಡಿತು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು ಮತ್ತು ಡಾ. ಮಹೇಶ ಧ. ಹೊರಕೇರಿ ವಂದಿಸಿದರು. ಈ ಸಂದರ್ಭದಲ್ಲಿ ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಶೈಲಜಾ ಅಮರಶೆಟ್ಟಿ, ಎಂ.ಎ. ಚಿಕ್ಕಮಠ, ಕೆ.ಎಚ್. ನಾಯಕ, ಶಂಕರ ಘಟ್ನಟ್ಟಿ, ಕಿರಣ್ ಸಿದ್ದಾಪುರ ಸೇರಿದಂತೆ ಮುಂತಾದ ಗಣ್ಯರು ಹಾಗೂ ಕನ್ನಡಿಗರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *