
ಧಾರವಾಡ: ಸಾಂಸ್ಕೃತಿಕ ಹಾಗೂ ವಿದ್ಯಾನಗರಿ ಎಂದೇ ಪ್ರಸಿದ್ಧಿಯಾದ ಧಾರವಾಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ 2026–27ರ ರಾಜ್ಯ ಬಜೆಟ್ನಲ್ಲಿ 3 ಸಾವಿರ ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಕಾಯ್ದಿರಿಸಬೇಕು ಎಂದು ಜನತಾದಳ (ಸಂಯುಕ್ತ) ಧಾರವಾಡ ಜಿಲ್ಲಾ ಘಟಕವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ. ಜಿಲ್ಲಾಧಿಕಾರಿಗಳ ಮುಖಾಂತರ ಈ ಮನವಿ ಸಲ್ಲಿಸಲಾಗಿದ್ದು, ಹಿಂದಿನ ಬಜೆಟ್ಗಳಲ್ಲಿ ಧಾರವಾಡ ಜಿಲ್ಲೆಗೆ ಸೂಕ್ತ ಆದ್ಯತೆ ಸಿಗದ ಕಾರಣ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಹುಬ್ಬಳ್ಳಿ–ಧಾರವಾಡ ಮಹಾನಗರವು ವೇಗವಾಗಿ ಬೆಳೆಯುತ್ತಿದ್ದರೂ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಸೊರಗುತ್ತಿದ್ದು, ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಬರುವ ಲಕ್ಷಾಂತರ ಜನರಿಗೆ ಅನುಕೂಲವಾಗುವಂತೆ ಜಿಲ್ಲೆಯ ವೈಭವವನ್ನು ಮರುಸ್ಥಾಪಿಸಬೇಕಾದ ಅಗತ್ಯವಿದೆ ಎಂದು ಜೆಡಿಯು ಮುಖಂಡರು ಒತ್ತಾಯಿಸಿದ್ದಾರೆ.
ಧಾರವಾಡ ನಗರದ ಒಳಚರಂಡಿ ವ್ಯವಸ್ಥೆ, ಉದ್ಯಾನವನಗಳು, ಬೀದಿದೀಪಗಳ ಸುಧಾರಣೆ ಹಾಗೂ ವಿದ್ಯಾರ್ಥಿ ನಿಲಯಗಳ ಸಂಖ್ಯೆಯನ್ನು ಹೆಚ್ಚಿಸಿ ಮೇಲ್ದರ್ಜೆಗೇರಿಸಲು 1 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಅಲ್ಲದೆ, ಜನಸಂಖ್ಯೆಗನುಗುಣವಾಗಿ ಹೊಸದಾಗಿ ಎರಡು ಪೊಲೀಸ್ ಠಾಣೆ ಹಾಗೂ ಸಂಚಾರಿ ಠಾಣೆಗಳ ಸ್ಥಾಪನೆ ಸೇರಿದಂತೆ ಧಾರವಾಡವನ್ನು ಧೂಳುಮುಕ್ತ ನಗರವನ್ನಾಗಿ ಮಾಡುವ ಗುರಿಯನ್ನು ಹೊಂದಬೇಕು ಎಂದು ತಿಳಿಸಲಾಗಿದೆ.
ಕೈಗಾರಿಕೆ, ತಂತ್ರಜ್ಞಾನ, ಆರೋಗ್ಯ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಜಿಲ್ಲೆಯು ಮುನ್ನಡೆ ಸಾಧಿಸಲು ಈ ವಿಶೇಷ ಅನುದಾನವು ಸಹಕಾರಿಯಾಗಲಿದೆ ಎಂದು ಜೆಡಿಯು ಅಭಿಪ್ರಾಯಪಟ್ಟಿದೆ.
ಜಿಲ್ಲೆಯ ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆಯೂ ಗಮನ ಸೆಳೆದಿರುವ ಪಕ್ಷವು, ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದೆ. ವಿಶೇಷವಾಗಿ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳದ ಪ್ರವಾಹದಿಂದ ಪದೇ ಪದೇ ಬೆಳೆಹಾನಿಯಾಗುತ್ತಿದ್ದು, ಇದಕ್ಕೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ತಾಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಸಂಪರ್ಕಿಸುವ ರಸ್ತೆಗಳನ್ನು ಸುಧಾರಿಸಲು ಹಾಗೂ ಕೆರೆಗಳ ನಿರ್ವಹಣೆಗೆ 2 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕು ಎಂದು ಪಕ್ಷವು ಸರ್ಕಾರವನ್ನು ವಿನಂತಿಸಿದೆ.
ಸಾಮಾಜಿಕ ನ್ಯಾಯದ ಹರಿಕಾರರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿಯಲ್ಲಿ ಮಂಡಿಸಲಿರುವ ಬಜೆಟ್ನಲ್ಲಿ ಧಾರವಾಡ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಗಮನಹರಿಸಬೇಕು ಎಂದು ಜೆಡಿಯು ಧಾರವಾಡ ಜಿಲ್ಲಾ ಅಧ್ಯಕ್ಷ ಶ್ರೀಶೈಲಗೌಡ ಕಮತರ, ಮುಖಂಡರಾದ ಜಾವೇದ್ ಬೆಳಗಾಂ, ಮಂಜುನಾಥ್ ಅಂಗಡಿ, ವೆಂಕರೆಡ್ಡಿ ತರ್ಲಾಪುರ ಆಗ್ರಹಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜೆಡಿಯು ಪಕ್ಷದ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

