ಮಹಿಳಾ ಅಧಿಕಾರಿಗಳಿಗೆ ಅಶ್ಲೀಲ ನಿಂದನೆ, ಜೀವ ಬೆದರಿಕೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಜಯ ಕರ್ನಾಟಕ ಬೃಹತ್ ಪ್ರತಿಭಟನೆ

Spread the love

ಧಾರವಾಡ, : ಚಿಕ್ಕಬಳ್ಳಾಪುರ ಹಾಗೂ ಮುಖ್ಯಮಂತ್ರಿಗಳ ಸ್ವಕ್ಷೇತ್ರ ವರುಣಾದಲ್ಲಿ ಮಹಿಳಾ ಅಧಿಕಾರಿಗಳ ಮೇಲೆ ನಡೆದ ದೌರ್ಜನ್ಯ, ಅಶ್ಲೀಲ ನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣಗಳನ್ನು ಖಂಡಿಸಿ, ಆರೋಪಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಬುದುವಾರದಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

​ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತರಾದ ಅಮೃತಾ ಗೌಡ ಹಾಗೂ ಪೌರಕಾರ್ಮಿಕರಿಗೆ ಅಶ್ಲೀಲ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಹಾಗೂ ವರುಣಾ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿ ಭವ್ಯ ಅವರ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಅಲ್ಲದೆ, ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಅರ್ಪಿಸಲಾಯಿತು.

​ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಅಧ್ಯಕ್ಷ ಸುಧೀರ ಎಮ್. ಮುಧೋಳ, ಶಿಡ್ಲಘಟ್ಟದಲ್ಲಿ ಪೌರಾಯುಕ್ತರಿಗೆ ಮತ್ತು ಪೌರಕಾರ್ಮಿಕರಿಗೆ ಧಮಕಿ ಹಾಕಿದ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ವಿರುದ್ಧ ಈಗಾಗಲೇ ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಆದರೂ ಕೆಲ ಸಚಿವರು ಆರೋಪಿಯನ್ನು ಸೌಮ್ಯ ಸ್ವಭಾವದವನು ಎಂದು ಸಮರ್ಥಿಸಿಕೊಳ್ಳುತ್ತಿರುವುದು ಖಂಡನೀಯ. ನೊಂದ ಅಧಿಕಾರಿ ದೂರು ನೀಡಿದ್ದರೂ ಆರೋಪಿಯನ್ನು ಬಂಧಿಸದಿರುವುದು ಅಕ್ಷಮ್ಯ. ಪೌರಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಸಮುದಾಯದವರಾಗಿದ್ದು, ಆರೋಪಿ ವಿರುದ್ಧ ಜಾತಿ ನಿಂದನೆ ಪ್ರಕರಣವನ್ನೂ ದಾಖಲಿಸಬೇಕು ಎಂದು ಆಗ್ರಹಿಸಿದರು.

​ಮುಖ್ಯಮಂತ್ರಿಯವರ ಸ್ವಕ್ಷೇತ್ರ ವರುಣಾದ ಗುಡಮಾದನಹಳ್ಳಿ ಗ್ರಾಮದ ಬಳಿ ನಿಮ್ಹಾನ್ಸ್ ಮಾದರಿಯ ಆಸ್ಪತ್ರೆ ನಿರ್ಮಾಣಕ್ಕೆ ಗುರುತಿಸಲಾದ ಜಮೀನು ಪರಿಶೀಲನೆಗೆ ತೆರಳಿದ್ದ ಮಹಿಳಾ ಅಧಿಕಾರಿ ಭವ್ಯ ಅವರ ಮೇಲೂ ಸ್ಥಳೀಯ ಪುಂಡನೊಬ್ಬ ಕೊಲೆ ಬೆದರಿಕೆ ಹಾಕಿರುವುದು ಆಘಾತಕಾರಿ ಸಂಗತಿ. ಇಂತಹ ಘಟನೆಗಳಿಂದ ಸರ್ಕಾರಿ ನೌಕರರಲ್ಲಿ ಅಭದ್ರತೆಯ ಭಾವ ಮೂಡಿದೆ. ದಕ್ಷತೆಯಿಂದ ಮತ್ತು ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಅಧಿಕಾರಿಗಳು ಇಂತಹ ಪುಂಡರ ಕಾಟಕ್ಕೆ ಬೇಸತ್ತು ಆತ್ಮಹತ್ಯೆಯಂತಹ ಕೃತ್ಯಗಳಿಗೆ ಮುಂದಾಗುವ ಅಪಾಯವಿದೆ. ಸರ್ಕಾರ ಕೂಡಲೇ ಇಂತಹ ರಾಜಕೀಯ ಪುಂಡರನ್ನು ನಿಯಂತ್ರಿಸಿ, ನೌಕರರಿಗೆ ರಕ್ಷಣೆ ನೀಡಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

​ಹೋರಾಟದಲ್ಲಿ ಧಾರವಾಡದ ನೂರಾರು ಪೌರಕಾರ್ಮಿಕರು ಪಾಲ್ಗೊಂಡಿದ್ದರು. ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳಾದ ಲಕ್ಷ್ಮಣ ಬ. ದೊಡ್ಡಮನಿ, ಶ್ರೀನಿವಾಸ ಕೊಠಂಕ, ನಾಗರಾಜ್ ಸಿ. ಕಟ್ಟಿಮನಿ, ವಿಕ್ರಂ ಡಿ. ಸಣ್ಣಮನಿ, ಬಸವರಾಜ್ ಮಾದರ್, ಮಂಜುನಾಥ್ ಕೊಂಡುಪಲಿ, ರವಿ ಸಿದ್ದಾಟಗಿಮಠ, ಶರೀಫ ಅಮ್ಮಿನಭಾವಿ, ಬಸವರಾಜ ಆನೇಗುಂದಿ, ವಿರುಪಾಕ್ಷಯ್ಯ ಹುಬ್ಬಳ್ಳಿಮಠ ಸೇರಿದಂತೆ ಅಲ್ತಾಫ ಮಾಲಿ, ನಾರಾಯಣ ಮಾದರ, ಶಬ್ಬಿರ ಅತ್ತಾರ, ಹನುಮಂತ ಮೊರಬ, ರಮೇಶ ಅರಳಿಕಟ್ಟಿ, ಅಲ್ತಾಫ ಜಾಲೇಗಾರ, ಚಂದ್ರು ಅಂಗಡಿ, ಮಂಜುನಾಥ ಸುತಗಟ್ಟಿ, ಮುತ್ತು ಕುಲಕರ್ಣಿ, ದುರ್ಗಪ್ಪ ಅಮ್ಮಿನಭಾವಿ, ರಾಜು ಜುನ್ನಾಯಕರ ಹಾಗೂ ಇನ್ನಿತರ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *