ಅಂಬೇಡ್ಕರ್ ಮೂರ್ತಿಗೆ ಅವಮಾನ ಹಾಗೂ ದಲಿತರ ಮೇಲೆ ದೌರ್ಜನ್ಯ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಮನವಿ

Spread the love

ಹುಬ್ಬಳ್ಳಿ: ಶಿಗ್ಗಾಂವ ತಾಲೂಕಿನ ಹೊಸೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಅವಮಾನ ಎಸಗಿರುವ ಹಾಗೂ ದಲಿತರ ಮೇಲೆ ದೌರ್ಜನ್ಯ ನಡೆಸಿರುವ ಘಟನೆಯನ್ನು ಖಂಡಿಸಿ ‘ಜೈ ಭೀಮ ಯುವ ಶಕ್ತಿ ಸೇನಾ’ ಸಂಘಟನೆಯು ಶುಕ್ರವಾರ ಹುಬ್ಬಳ್ಳಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.

​ಹೊಸೂರು ಗ್ರಾಮದಲ್ಲಿ ಜನವರಿ 26 ರಂದು ರಾತ್ರಿ ಕಿಡಿಗೇಡಿಗಳು ಅಂಬೇಡ್ಕರ್ ಅವರ ಮೂರ್ತಿಗೆ ಸಗಣಿ ಬಳೆದು ವಿಕೃತಿ ಮೆರೆದಿದ್ದಾರೆ ಎಂದು ಸಂಘಟನೆಯು ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಜಿಲ್ಲಾಧ್ಯಕ್ಷ ಹರೀಶ ಎಮ್. ಗುಂಟ್ರಾಳ ಅವರು, ಕಳೆದ ಮೂರು ವರ್ಷಗಳಿಂದ ಗ್ರಾಮದಲ್ಲಿ ದಲಿತರನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಗುತ್ತಿದ್ದು, ದೇವಸ್ಥಾನಗಳಿಗೆ ಪ್ರವೇಶ ನಿರಾಕರಿಸಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ದೂರಿದ್ದಾರೆ. ಅಲ್ಲದೆ, ಇತ್ತೀಚೆಗೆ ದಲಿತರ ಮೇಲೆ ಏಕಾಏಕಿ ಹಲ್ಲೆ ನಡೆಸಿರುವುದು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಕೃತ್ಯವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

​ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಘಟನೆಯು ಆಗ್ರಹಿಸಿದೆ. ಗ್ರಾಮದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಪೊಲೀಸ್ ಬಂದೋಬಸ್ತ್ ಒದಗಿಸಬೇಕು ಹಾಗೂ ದಲಿತರಿಗೆ ಸೂಕ್ತ ರಕ್ಷಣೆ ನೀಡಿ ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಠ ಪದ್ಧತಿಗಳನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು ಸರ್ಕಾರ ತ್ವರಿತವಾಗಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಸಂಘಟನೆ ಎಚ್ಚರಿಸಿದೆ.

Leave a Reply

Your email address will not be published. Required fields are marked *