
ಜಿಲ್ಲಾ ಪೊಲೀಸ್ ಕಚೇರಿಗೆ ಪೊಲೀಸ್ ಮಹಾನಿರೀಕ್ಷಕ ವಿಕಾಸ್ ಕುಮಾರ ವಿಕಾಸ್ ಭೇಟಿ
ಧಾರವಾಡ: ನ.14 ಜಿಲ್ಲಾ ಪೊಲೀಸ್ ಘಟಕದ ಪರಿವೀಕ್ಷಣೆಯ ಅಂಗವಾಗಿ, ನಿನ್ನೆ (ನ.13) ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರೀಕ್ಷಕರಾದ ವಿಕಾಸ್ ಕುಮಾರ ವಿಕಾಸ್ ಅವರು ಧಾರವಾಡ ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ, ಗೌರವ ರಕ್ಷೆಯನ್ನು ಸ್ವೀಕರಿಸಿದರು.
ನಂತರ ಅವರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಿವಿಧ ಇಲಾಖೆಗಳ ಕಡತಗಳನ್ನು ಪರಿಶೀಲಿಸಿದರು. ಜಿಲ್ಲಾ ವಿಶೇಷ ಘಟಕ ಹಾಗೂ ಜಿಲ್ಲೆಯ ಸಾಮಾಜಿಕ ಜಾಲತಾಣ ನಿಗಾ ಘಟಕದ ದಾಖಲೆಗಳನ್ನೂ ಪರಿಶೀಲಿಸಿ, ಪರಿವೀಕ್ಷಣೆ ಕೈಗೊಂಡರು.
ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದ ಅವರು, ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

