
ಧಾರವಾಡ, ನವೆಂಬರ್ 12: ಧಾರವಾಡ ಮದಿಹಾಳ ನಗರದ ಸಿದ್ಧಾರೊಡ ಕಾಲೋನಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಇಂದು ಮಧ್ಯಾಹ್ನ ದಿಢೀರ್ ಭೇಟಿ ನೀಡಿ, ಮಕ್ಕಳ ಹಾಜರಾತಿ ಮತ್ತು ದಾಖಲಾತಿಗಳನ್ನು ಪರಿಶೀಲಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಕೇಂದ್ರಕ್ಕೆ ಆಗಮಿಸುತ್ತಿದ್ದಂತೆಯೇ ಪುಟ್ಟ ಮಕ್ಕಳು ಗುಲಾಬಿ ಹೂ ನೀಡುವ ಮೂಲಕ ಆತ್ಮೀಯ ಸ್ವಾಗತ ಕೋರಿ ಅವರ ಮುಖದಲ್ಲಿ ನಗು ಮೂಡಿಸಿದರು. ಕೇಂದ್ರದಲ್ಲಿ ಒಟ್ಟು 37 ಮಕ್ಕಳು ಹಾಜರಿದ್ದು, ಶಿಕ್ಷಕಿಯರು ಮಕ್ಕಳಿಗೆ ಹಾಡು ಹಾಡಿಸಿ ನೃತ್ಯ ಮಾಡಿಸಿದರು. ಅದೇ ವೇಳೆ ಜಿಲ್ಲಾಧಿಕಾರಿಯವರು ಸಹ ಮಕ್ಕಳೊಂದಿಗೆ ಹಾಡು ಹಾಡಿ ಸಂತೋಷ ಹಂಚಿಕೊಂಡರು. ಅವರು ನೆಲದ ಮೇಲೆ ಕುಳಿತು ಪ್ರತಿ ಮಗುವಿನೊಂದಿಗೆ ಮಾತನಾಡಿ, ಅವರ ಶಾಲೆ, ಮನೆ, ಆಟಗಳು ಮತ್ತು ಆಹಾರ ಕುರಿತಂತೆ ವಿಚಾರಿಸಿದರು. ಮಕ್ಕಳ ಹಾಸ್ಯ, ನಗು ಮತ್ತು ನಿರಾಳ ವರ್ತನೆ ಕಂಡು ಜಿಲ್ಲಾಧಿಕಾರಿಯವರು ಸಂತೋಷ ವ್ಯಕ್ತಪಡಿಸಿದರು.
ದಿವ್ಯ ಪ್ರಭು ಅವರು ಮಕ್ಕಳಿಗೆ ಚಾಕ್ಲೇಟ್ ನೀಡುವ ಮೂಲಕ ಸಿಹಿ ಹಂಚಿಕೊಂಡು ಅವರ ದಿನವನ್ನು ಮಧುರಗೊಳಿಸಿದರು. ಅಲ್ಲದೆ, ಮಕ್ಕಳ ಆಹಾರ ಮತ್ತು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಿದರು.
ಡಿಸಿ ಮತ್ತು ಸಿಇಓ ಅವರು ಅಂಗನವಾಡಿ ಕೇಂದ್ರದ ಕಾರ್ಯವೈಖರಿ, ಪೌಷ್ಠಿಕ ಆಹಾರ ವಿತರಣೆಯ ವಿಧಾನ, ಮಕ್ಕಳ ಹಾಜರಾತಿ ದಾಖಲೆಗಳು ಹಾಗೂ ಕೇಂದ್ರದ ಸ್ವಚ್ಛತೆ ಕುರಿತಂತೆ ಸಮಗ್ರ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಡಾ. ಎಚ್.ಎಚ್. ಕುಕನೂರ ಅವರು, ಧಾರವಾಡ ಜಿಲ್ಲೆಯಲ್ಲಿ 1,622 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಗರ್ಭಿಣಿಯರು, ಬಾಣಂತಿಯರು ಮತ್ತು 0 ರಿಂದ 6 ವರ್ಷದ ಮಕ್ಕಳನ್ನು ಒಳಗೊಂಡು ಒಟ್ಟು 1,22,298 ಫಲಾನುಭವಿಗಳು ದಾಖಲಾಗಿ ಯೋಜನೆಯಿಂದ ಲಾಭ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಅವರು ತಿಳಿಸಿದಂತೆ, ಐಸಿಡಿಎಸ್ ಯೋಜನೆಯಡಿ “ಪೋಷಣ್ ಟ್ರ್ಯಾಕರ್” ಆ್ಯಪ್ ಮೂಲಕ ಫಲಾನುಭವಿಗಳ ವಿವರಗಳನ್ನು ದಾಖಲಿಸಲಾಗುತ್ತಿದ್ದು, ಫೇಸ್ ರಿಕಾಗ್ನಿಷನ್ ಸಿಸ್ಟಮ್ ಮೂಲಕ 1,19,841 ಫಲಾನುಭವಿಗಳ ವಿವರಗಳನ್ನು ಅಳವಡಿಸಲಾಗಿದೆ. ಉಳಿದ 2,449 ಪ್ರಕರಣಗಳಲ್ಲಿ ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರದ ತೊಂದರೆಗಳಿಂದ ಮಾಹಿತಿ ನವೀಕರಣ ಬಾಕಿಯಿದೆ.
ಜಿಲ್ಲಾಧಿಕಾರಿಯವರು ಅಲೆಮಾರಿ ಮತ್ತು ಕಾಲಿಕ ಸಮುದಾಯದ ಮಹಿಳೆಯರೊಂದಿಗೆ ಸಂಭಾಷಣೆ ನಡೆಸಿ, ಫೇಸ್ ರಿಕಾಗ್ನಿಷನ್ ಪ್ರಕ್ರಿಯೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿಚಾರಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಂಗನವಾಡಿ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದ ಡಿಸಿ ಮತ್ತು ಸಿಇಓ ಅವರು ಸರ್ಕಾರದ ಪೌಷ್ಠಿಕ ಆಹಾರ ಯೋಜನೆಗಳ ಪ್ರಾಯೋಗಿಕ ಅನುಷ್ಠಾನವನ್ನು ಪರಿಶೀಲಿಸಿದರು. ಅವರು ಮಕ್ಕಳೊಂದಿಗೆ ಅನ್ನ, ಸಾರು, ಮೊಟ್ಟೆ ಮತ್ತು ಬಾಳೆಹಣ್ಣು ಸೇವಿಸಿದರು. “ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ನೀಡುವ ಆಹಾರ ಸರ್ಕಾರದ ನಿಯಮಾನುಸಾರವಾಗಿರಬೇಕು. ಆಹಾರದ ತೂಕ ಮತ್ತು ಪೌಷ್ಟಿಕಾಂಶದಲ್ಲಿ ವ್ಯತ್ಯಾಸ ಇರಬಾರದು. ಅಂಗನವಾಡಿ ಕೇಂದ್ರವನ್ನು ತಾಯಿಯ ಮಮತೆಯಿಂದ ಮುನ್ನಡೆಸಬೇಕು,” ಎಂದು ದಿವ್ಯ ಪ್ರಭು ಕಾರ್ಯಕರ್ತೆಯರಿಗೆ ಕಿವಿಮಾತು ನೀಡಿದರು.
ಸಿಇಓ ಭುವನೇಶ ಪಾಟೀಲ ಅವರು ಸಹ ಮಕ್ಕಳ ಹಾಗೂ ಸಿಬ್ಬಂದಿಯೊಂದಿಗೆ ಮಾತನಾಡಿ, ಅಂಗನವಾಡಿಯ ದಾಖಲೆಗಳನ್ನು ಪರಿಶೀಲಿಸಿದರು. ಪ್ರತಿಯೊಬ್ಬ ಮಗುವೂ ಸಂಪೂರ್ಣ ಪೌಷ್ಠಿಕ ಆಹಾರ ಪಡೆಯಬೇಕು ಮತ್ತು ಪ್ರತಿದಿನದ ಹಾಜರಾತಿ ಖಚಿತವಾಗಿರಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸುವ ಅಂಗನವಾಡಿಗಳು ಮಕ್ಕಳ ಸಮಗ್ರ ಬೆಳವಣಿಗೆಯ ಮೊದಲ ಹಂತವಾಗಿದ್ದು, ಇಲ್ಲಿನ ಆರೈಕೆ ಮತ್ತು ಶಿಕ್ಷಣವೇ ಅವರ ಭವಿಷ್ಯದ ಬುನಾದಿ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿಯವರ ಈ ಅಚ್ಚರಿ ಭೇಟಿಯಿಂದ ಕಾರ್ಯಕರ್ತೆಯರು ಸಂತೋಷಗೊಂಡು ತಮ್ಮ ಕೇಂದ್ರದ ಚಟುವಟಿಕೆಗಳನ್ನು ಉತ್ಸಾಹದಿಂದ ಪ್ರದರ್ಶಿಸಿದರು. ಸ್ಥಳೀಯರು ಜಿಲ್ಲಾಧಿಕಾರಿಯವರ ಸರಳತೆ ಮತ್ತು ಮಕ್ಕಳ ಮೇಲಿನ ಮಮತೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ. ಡಿ.ಎಚ್. ಹೂಗಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಡಾ. ಕಮಲಾ ಬೈಲೂರ, ಹುಬ್ಬಳ್ಳಿ–ಧಾರವಾಡ ನಗರ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಸುನಿತಾ ಪಾಟೀಲ, ವಲಯ ಸಹಾಯಕ ಆಯುಕ್ತೆ ಭಾಗ್ಯಶ್ರೀ ಹುಗ್ಗಿ, ಹಿರಿಯ ಆರೋಗ್ಯ ನಿರೀಕ್ಷಕ ಶಾಂತಗೌಡ ಬಿರಾದಾರ, ಮೇಲ್ವಿಚಾರಕಿಯರಾದ ರೇಣುಕಾ ಅಸುಂಡಿ ಹಾಗೂ ನೇತ್ರಾವತಿ ಎಚ್.ಎಸ್., ಕಾರ್ಯಕರ್ತೆಯರಾದ ರಾಜಮ್ಮ, ರೇಣುಕಾ ವಾಲ್ಮೀಕಿ, ರತ್ನವ್ವ ಶಿರನೂರ, ಸಹಾಯಕಿಯರಾದ ರತ್ನಾ ಕೋಟಿ ಮತ್ತು ಮಕ್ಕಳ ಪಾಲಕರು ಉಪಸ್ಥಿತರಿದ್ದರು.

