
ಹುಬ್ಬಳ್ಳಿ: ವಾಣಿಜ್ಯ ನಗರಿಯ ವಿಮಾನ ನಿಲ್ದಾಣದಲ್ಲಿ ವಿನೂತನ ಪ್ರಯೋಗವೊಂದು ಆರಂಭವಾಗಿದ್ದು, ಭಾರತದ ಮೊದಲ ‘ಫ್ಲೈಬ್ರರಿ’ (Flybrary – ವಿಮಾನ ನಿಲ್ದಾಣದ ಗ್ರಂಥಾಲಯ) ಭಾನುವಾರ ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು. ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಹಾಗೂ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಈ ವಿಶೇಷ ಲೈಬ್ರರಿಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಯಿತು.
ಗ್ರಂಥಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ ಅವರು, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತಾಸುಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಮೊಬೈಲ್ ಬಳಕೆಯ ಬದಲು ಪುಸ್ತಕಗಳನ್ನು ಓದುವ ಮೂಲಕ ಜ್ಞಾನಾರ್ಜನೆ ಮಾಡಿಕೊಳ್ಳಲು ಈ ಗ್ರಂಥಾಲಯ ಉತ್ತಮ ವೇದಿಕೆಯಾಗಿದೆ ಎಂದರು. ಓದಿನ ಹವ್ಯಾಸದಿಂದ ರಚನಾತ್ಮಕ ಕಾರ್ಯಗಳು ಸಾಧ್ಯವಾಗುತ್ತವೆ ಎಂದು ಅಭಿಪ್ರಾಯಪಟ್ಟ ಅವರು, ಗ್ರಂಥಾಲಯಕ್ಕೆ ವೈಯಕ್ತಿಕವಾಗಿ 50 ಪುಸ್ತಕಗಳನ್ನು ನೀಡುವುದಾಗಿ ಘೋಷಿಸಿದರು.
ದಕ್ಷಿಣ ಭಾರತದಲ್ಲೇ ಪ್ರಥಮ ಹೆಜ್ಜೆ:
ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ಮಾತನಾಡಿ, ಭಾರತದಲ್ಲೇ ಇಂತಹದೊಂದು ಆಲೋಚನೆ ಇದೇ ಮೊದಲು ಎನ್ನಬಹುದು. ಕೆಲವು ತಾಂತ್ರಿಕ ಕಾರಣಗಳಿಂದ ಯೋಜನೆ ತಡವಾದರೂ, ಸದ್ಯ ದಕ್ಷಿಣ ಭಾರತದಲ್ಲೇ ಇದು ಪ್ರಥಮ ಹೆಜ್ಜೆಯಾಗಿದೆ. ವಿಮಾನ ನಿಲ್ದಾಣದ ನೂತನ ಕಟ್ಟಡ ನಿರ್ಮಾಣವಾದ ಬಳಿಕ ಗ್ರಂಥಾಲಯಕ್ಕೆ ಮತ್ತಷ್ಟು ಹೆಚ್ಚಿನ ಜಾಗ ಹಾಗೂ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಅರುಣ ಭಂಡಾರೆ ಮಾತನಾಡಿ, ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು, ಈ ಗ್ರಂಥಾಲಯವು ಪ್ರಯಾಣಿಕರ ಪಾಲಿಗೆ ಜ್ಞಾನದ ದೇಗುಲವಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಅಧ್ಯಕ್ಷೆ ರೀಟಾ ಹಂಡಾ ಹಾಗೂ ಡಾ. ವೀರೇಶ ಹಂಡಿಗಿ ಅವರು ಈ ವಿಶೇಷ ಗ್ರಂಥಾಲಯದ ಕಲ್ಪನೆ ಹಾಗೂ ಕಾರ್ಯರೂಪಕ್ಕೆ ತಂದ ಬಗೆಯನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದ ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ ಅವರು 100 ಪುಸ್ತಕಗಳನ್ನು ಹಾಗೂ ರೋಟರಿ ಸದಸ್ಯರು 100 ಪುಸ್ತಕಗಳನ್ನು ಗ್ರಂಥಾಲಯಕ್ಕೆ ಹಸ್ತಾಂತರಿಸಿದರು.
ಈ ಐತಿಹಾಸಿಕ ಕ್ಷಣದಲ್ಲಿ ವಿಮಾನ ನಿಲ್ದಾಣದ ಅಧಿಕಾರಿ ಬಿ.ವಿ. ಪ್ರತಾಪ, ರೋಟರಿ ಸೆಂಟ್ರಲ್ ಅಧ್ಯಕ್ಷೆ ಅಂಜನಾ ಬಸನಗೌಡರ, ಸುನಿತಾ ಕಲ್ಲೊಳಿ, ಶ್ರಾವಣಿ ಪವಾರ ಸೇರಿದಂತೆ ಹಲವು ಗಣ್ಯರು ಹಾಗೂ ರೋಟರಿ ಸದಸ್ಯರು ಪಾಲ್ಗೊಂಡಿದ್ದರು. ಹುಬ್ಬಳ್ಳಿ ವಿಮಾನ ನಿಲ್ದಾಣವು ಇಂತಹ ನವೀನ ಚಿಂತನೆಗೆ ಸಾಕ್ಷಿಯಾಗುವ ಮೂಲಕ ದೇಶದ ಗಮನ ಸೆಳೆದಿದೆ.

