ನಗದು ವ್ಯವಹಾರದ ಮೇಲೆ ಐಟಿ ‘ಸರ್ಜರಿ’: ಇಂದಿನಿಂದಲೇ ಹೊಸ ನಿಯಮ ಜಾರಿ, ನಿಯಮ ಮೀರಿದರೆ 100% ದಂಡ!

Spread the love

ಬೆಂಗಳೂರು: ದೇಶದ 64 ವರ್ಷಗಳ ಹಳೆಯ ಆದಾಯ ತೆರಿಗೆ ಕಾನೂನಿಗೆ ಕೇಂದ್ರ ಸರ್ಕಾರ ಭಾರಿ ತಿದ್ದುಪಡಿ ತಂದಿದ್ದು, ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ನಗದು ವ್ಯವಹಾರಗಳ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಕಪ್ಪು ಹಣ ತಡೆಗಟ್ಟುವ ಉದ್ದೇಶದಿಂದ ಜಾರಿಗೆ ಬಂದಿರುವ ಈ ನಿಯಮಗಳು ಸಾಮಾನ್ಯ ಜನರಿಂದ ಹಿಡಿದು ಉದ್ಯಮಿಗಳವರೆಗೆ ಪ್ರತಿಯೊಬ್ಬರಿಗೂ ಅನ್ವಯವಾಗಲಿವೆ.

ಪ್ರಮುಖ ನಿರ್ಬಂಧಗಳು ಮತ್ತು ದಂಡದ ವಿವರ:

2 ಲಕ್ಷ ರೂ. ಮೀರಿದ ವ್ಯವಹಾರಕ್ಕೆ 100% ದಂಡ:

ಯಾವುದೇ ವ್ಯಕ್ತಿಯಿಂದ ಒಂದು ದಿನದಲ್ಲಿ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಸ್ವೀಕರಿಸುವುದು ಅಪರಾಧವೆಂದು ಪರಿಗಣಿಸಲಾಗುತ್ತದೆ. ಮದುವೆ, ಮನೆ ನಿರ್ಮಾಣ ಅಥವಾ ಬಾಡಿಗೆಯಂತಹ ಯಾವುದೇ ಕಾರಣಕ್ಕಾಗಿಯೇ ಇರಲಿ, 2 ಲಕ್ಷಕ್ಕಿಂತ ಹೆಚ್ಚು ನಗದು ವ್ಯವಹಾರ ನಡೆಸಿದರೆ, ಆ ಮೊತ್ತಕ್ಕೆ ಸಮನಾದ (ಶೇ. 100ರಷ್ಟು) ದಂಡವನ್ನು ತೆರಬೇಕಾಗುತ್ತದೆ.

20 ಸಾವಿರ ರೂ.ಗಳ ಮಿತಿ:

ಯಾರಿಗಾದರೂ ನಗದು ನೀಡುವಾಗ ಅಥವಾ ಪಡೆಯುವಾಗ 20 ಸಾವಿರ ರೂಪಾಯಿಗಳವರೆಗೆ ಮಾತ್ರ ಮುಕ್ತ ಅವಕಾಶವಿದೆ. ಈ ಮಿತಿ ದಾಟಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ.

. ಐಟಿ ರಿಟರ್ನ್ ಸಲ್ಲಿಸದವರಿಗೆ 20 ಲಕ್ಷದ ಮಿತಿ:

ಕಳೆದ ಮೂರು ವರ್ಷಗಳಿಂದ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸದವರಿಗೆ ವಾರ್ಷಿಕ ನಗದು ವಿತ್‌ಡ್ರಾ ಮಿತಿಯನ್ನು 20 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಈ ಮಿತಿ ಮೀರಿದಲ್ಲಿ ಹೆಚ್ಚುವರಿ ಮೊತ್ತದ ಮೇಲೆ ಶೇ. 2ರಷ್ಟು ಟಿಡಿಎಸ್ (TDS) ಕಡಿತಗೊಳಿಸಲಾಗುತ್ತದೆ.

ಯುಪಿಐ (UPI) ಮೂಲಕ ಹಣ ಡ್ರಾಗೆ ಶುಲ್ಕ:

ಎಟಿಎಂ ಕಾರ್ಡ್ ಇಲ್ಲದೆ ಯುಪಿಐ ಬಳಸಿ ಹಣ ತೆಗೆಯುವ ವ್ಯವಸ್ಥೆಗೆ ಈಗ ಮಿತಿ ಹೇರಲಾಗಿದೆ. ತಿಂಗಳಿಗೆ ಕೇವಲ 5 ಬಾರಿ ಮಾತ್ರ ಉಚಿತವಾಗಿ ಹಣ ಪಡೆಯಬಹುದು. ಅದಕ್ಕಿಂತ ಹೆಚ್ಚಿನ ಪ್ರತಿ ವಹಿವಾಟಿಗೆ 23 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.

ಸಾರ್ವಜನಿಕರಿಗೆ ಸಲಹೆ:

​ನಗದು ವ್ಯವಹಾರಗಳ ಮೇಲೆ ಐಟಿ ಇಲಾಖೆ ತೀವ್ರ ನಿಗಾ ಇಟ್ಟಿದ್ದು, ಭಾರಿ ದಂಡದಿಂದ ಪಾರಾಗಲು ಡಿಜಿಟಲ್ ವ್ಯವಹಾರಗಳಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಆನ್‌ಲೈನ್ ಬ್ಯಾಂಕಿಂಗ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಎಷ್ಟು ಬೇಕಾದರೂ ವ್ಯವಹಾರ ನಡೆಸಲು ಮುಕ್ತ ಅವಕಾಶವಿದ್ದು, ನಗದು ಬಳಕೆಯನ್ನು ಆದಷ್ಟು ಕಡಿಮೆ ಮಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ.

Leave a Reply

Your email address will not be published. Required fields are marked *