ಇನಾಂವೀರಾಪುರ ದೌರ್ಜನ್ಯ ಪ್ರಕರಣ: ವಿವೇಕಾನಂದ ಆಸ್ಪತ್ರೆ ಹಾಗೂ ಗ್ರಾಮಕ್ಕೆ ಜಾಗೃತ ಮತ್ತು ಉಸ್ತುವಾರಿ ಸಮಿತಿ ತಂಡ ಭೇಟಿ

Spread the love

ಹುಬ್ಬಳ್ಳಿ: ತಾಲ್ಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ದಲಿತ ಕುಟುಂಬದ ಮೇಲಿನ ಭೀಕರ ದೌರ್ಜನ್ಯದ ಹಿನ್ನೆಲೆಯಲ್ಲಿ, ಜಿಲ್ಲಾ ಹಾಗೂ ಉಪವಿಭಾಗ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರ ತಂಡವು ಸಂತ್ರಸ್ತರಿಗೆ ಸಾಂತ್ವನ ನೀಡಲು ಬುದುವಾರದಂದು ಭೇಟಿ ನೀಡಿತು.

​ಸಮಿತಿಯ ಸದಸ್ಯರು ಮೊದಲು ಹುಬ್ಬಳ್ಳಿ ನಗರದ ವಿವೇಕಾನಂದ ಆಸ್ಪತ್ರೆಗೆ ಭೇಟಿ ನೀಡಿ, ದಾಳಿಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಕುಟುಂಬದ ಸದಸ್ಯರ ಆರೋಗ್ಯ ವಿಚಾರಿಸಿದರು. ಘಟನೆಯ ಕುರಿತು ಗಾಯಾಳುಗಳಿಂದ ಮಾಹಿತಿ ಪಡೆದ ತಂಡವು, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿತು. ಆಸ್ಪತ್ರೆಯ ಭೇಟಿಯ ನಂತರ ನೇರವಾಗಿ ಇನಾಂವೀರಾಪುರ ಗ್ರಾಮಕ್ಕೆ ತೆರಳಿದ ಸಮಿತಿಯು, ಕೃತ್ಯ ನಡೆದ ಸ್ಥಳವನ್ನು ಪರಿಶೀಲಿಸಿತು. ಅಲ್ಲಿನ ಉಳಿದ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿ ಅವರ ಯೋಗಕ್ಷೇಮ ವಿಚಾರಿಸಿದ ತಂಡವು, ಯಾವುದೇ ಕಾರಣಕ್ಕೂ ಧೈರ್ಯಗುಂದಬಾರದು ಎಂದು ಸಾಂತ್ವನ ಹೇಳಿದರು.

​ಇದೇ ಸಂದರ್ಭದಲ್ಲಿ ಸಮಿತಿಯ ಸದಸ್ಯರು ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಕರಣದ ಸಂಪೂರ್ಣ ವಿವರ ಪಡೆದರು. ಸಂತ್ರಸ್ತ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರಗಳನ್ನು ತಕ್ಷಣವೇ ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

​ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಬಸವರಾಜ ಮಾದರ, ಕಲ್ಮೇಶ ಹಾದಿಮನಿ, ಫಕ್ಕೀರಪ್ಪ ಮಂಡ್ಯಾಳ, ಸುರೇಶ ಕುಂದಗೋಳ, ಮಾಳಾ ತುರುವಿಹಾಳ ಅವರು ಉಪಸ್ಥಿತರಿದ್ದರು. ಇವರೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶುಭಾ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರಿಯದರ್ಶಿನಿ ಹಿರೇಮಠ ಹಾಗೂ ಇತರ ಇಲಾಖಾ ಅಧಿಕಾರಿಗಳು ಭೇಟಿಯ ಸಮಯದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *