
ಹುಬ್ಬಳ್ಳಿ: ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ದಲಿತ ಯುವಕನ ಪತ್ನಿಯ ಬರ್ಬರ ಹತ್ಯೆ ಹಾಗೂ ಯುವಕನ ಕುಟುಂಬದ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರು ಸಂತ್ರಸ್ತ ಕುಟುಂಬಕ್ಕೆ ಸೋಮವಾರದಂದು ಭೇಟಿ ನೀಡಿ ಸಾಂತ್ವನ ಹೇಳಿದರು. ದೌರ್ಜನ್ಯಕ್ಕೊಳಗಾದ ಮರಿಯಪ್ಪ ದೊಡ್ಡಮನಿ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು, ಘಟನೆಯ ವಿವರಗಳನ್ನು ಪಡೆದು ನೊಂದವರಿಗೆ ಧೈರ್ಯ ತುಂಬಿದರು.
ನಂತರ ಗ್ರಾಮದ ಮುಖಂಡರು ಹಾಗೂ ಸ್ಥಳದಲ್ಲಿದ್ದ ಹುಬ್ಬಳ್ಳಿ ಗ್ರಾಮೀಣ ಡಿವೈಎಸ್ಪಿ ವಿನೋದ ಮುಕ್ತೇದಾರ ಮತ್ತು ಸಿ.ಆರ್. ಸೆಲ್ ನಿರೀಕ್ಷಕ ವೀರಭದ್ರಪ್ಪ ಕಡಿ ಅವರ ಸಮ್ಮುಖದಲ್ಲಿ ಮಾತನಾಡಿದ ಮಾವಳ್ಳಿ ಶಂಕರ್, ಲಿಂಗಾಯಿತ ಸಮುದಾಯದ ಯುವತಿ ಮಾನ್ಯ ಎಂಬಾಕೆ ದಲಿತ ಯುವಕ ವಿವೇಕಾನಂದನನ್ನು ವಿವಾಹವಾಗಿದ್ದ ಕಾರಣಕ್ಕೆ ಆಕೆ ಗರ್ಭಿಣಿಯಿದ್ದಾಗಲೇ ತಂದೆ ಪ್ರಕಾಶಗೌಡ ಪಾಟೀಲ್ ಬರ್ಬರವಾಗಿ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಮರ್ಯಾದೆ ಹತ್ಯೆಗಳ ನಿಗ್ರಹಕ್ಕಾಗಿ ಸರ್ಕಾರ ಕೂಡಲೇ ಪ್ರತ್ಯೇಕ ಮತ್ತು ಕಟ್ಟುನಿಟ್ಟಿನ ಕಾಯ್ದೆ ರೂಪಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಮರ್ಯಾದೆಯ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಹತ್ಯೆಗಳಲ್ಲಿ ಯಾವುದೇ ಗೌರವ ಅಡಗಿಲ್ಲ, ಇದೊಂದು ಜಾತಿಗ್ರಸ್ತ ಸಮಾಜ ಎಸಗುವ ಕ್ರೂರ ಕೊಲೆಯಷ್ಟೇ ಎಂದು ಅವರು ಕಿಡಿಕಾರಿದರು. ಜಾತಿ ಮತ್ತು ಪಿತೃಪ್ರಭುತ್ವದ ಅಹಂನಿಂದ ಮಹಿಳೆಯರ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಸ್ವಂತ ಮಗಳ ಜೀವ ತೆಗೆಯುವುದು ಜಾತಿ ವ್ಯವಸ್ಥೆಯ ಕ್ರೌರ್ಯದ ಪರಮಾವಧಿಯಾಗಿದ್ದು, ಇಂತಹ ಕೃತ್ಯಗಳು ಸಂವಿಧಾನದ ಆಶಯಗಳಾದ ಸಮಾನತೆ ಮತ್ತು ಭ್ರಾತೃತ್ವಕ್ಕೆ ದೊಡ್ಡ ಹೊಡೆತ ನೀಡುತ್ತಿವೆ ಎಂದು ಅವರು ವಿಷಾದಿಸಿದರು.
ಸುಪ್ರೀಂ ಕೋರ್ಟ್ ಮರ್ಯಾದೆ ಹತ್ಯೆಗಳನ್ನು ಅನಾಗರಿಕ ಕೃತ್ಯ ಎಂದು ಕರೆದಿದ್ದರೂ, ಜಾತಿ ರಾಜಕಾರಣದಲ್ಲಿ ಮುಳುಗಿರುವ ಸರ್ಕಾರಗಳು ಇಂತಹ ವ್ಯವಸ್ಥೆಯನ್ನು ಪೋಷಿಸುತ್ತಿವೆ ಎಂದು ಅವರು ದೂರಿದರು. ಅಂತರ್ಜಾತಿ ವಿವಾಹಗಳು ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಪಡಿಸುತ್ತವೆ ಎಂದು ನ್ಯಾಯಾಲಯ ಹೇಳಿದ್ದರೂ, ಇಂತಹ ಹೇಯ ಕೃತ್ಯಗಳು ಮರುಕಳಿಸುತ್ತಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಹತ್ಯೆಯಾದ ಮಾನ್ಯಳ ಪತಿ ವಿವೇಕಾನಂದ ದೊಡ್ಡಮನಿ, ದಸಂಸ ಧಾರವಾಡ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಶರೇವಾಡ, ಲಕ್ಷ್ಮಣ ದೊಡ್ಡಮನಿ, ಭರತರಾಜ ಅರವೇಡ ಸೇರಿದಂತೆ ಸಂಘಟನೆಯ ಹಲವು ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

