ಶನಿವಾರ, 21 Nov 2026 | ಕನ್ನಡ & ರಾಷ್ಟ್ರೀಯ ಸುದ್ದಿ ಪೋರ್ಟಲ್
Bangalore

ಅಕ್ರಮ ಸಂಬಂಧದ ಅನುಮಾನಕ್ಕೆ ಅಮಾಯಕ ಬಾಲಕ ಬಲಿ; ಬೆಂಗಳೂರಿನಲ್ಲಿ ಮನಕಲಕುವ ಘಟನೆ

30-ಸೆಕೆಂಡ್ ಮುಖ್ಯಾಂಶಗಳು (30-Sec AI Summary)
  • ಪ್ರಮುಖ ಬೆಳವಣಿಗೆ: ಅಕ್ರಮ ಸಂಬಂಧದ ಅನುಮಾನಕ್ಕೆ ಅಮಾಯಕ ಬಾಲಕ ಬಲಿ; ಬೆಂಗಳೂರಿನಲ್ಲಿ ಮನಕಲಕುವ ಘಟನೆ
  • Spread the love Recent Views 54 ಬೆಂಗಳೂರು: ಮನುಷ್ಯನಿಗೆ ಎಷ್ಟೇ ಶಿಕ್ಷಣ, ತಿಳುವಳಿಕೆ ಮತ್ತು ಅನುಭವವಿದ್ದರೂ ಮನಸ್ಸಿನ ಮೇಲೆ ಹಿಡಿತವಿಲ್ಲದಿದ್ದರೆ ಅದರ ಪರಿಣಾಮ ಎಷ್ಟು ಭೀಕರವಾಗಿರಬಹುದು…
  • ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಸ್ಥಳೀಯ ಮೂಲಗಳಿಂದ ಸಮಗ್ರ ವರದಿ ಪರಿಶೀಲನೆ.
ಸುದ್ದಿ ಆಲಿಸಿ • ಸಿದ್ಧವಾಗಿದೆ (Ready)
AI ಆಡಿಯೋ ನ್ಯೂಸ್‌ರೂಮ್ • ಕನ್ನಡ & English
ವೇಗ:
Spread the love

ಬೆಂಗಳೂರು: ಮನುಷ್ಯನಿಗೆ ಎಷ್ಟೇ ಶಿಕ್ಷಣ, ತಿಳುವಳಿಕೆ ಮತ್ತು ಅನುಭವವಿದ್ದರೂ ಮನಸ್ಸಿನ ಮೇಲೆ ಹಿಡಿತವಿಲ್ಲದಿದ್ದರೆ ಅದರ ಪರಿಣಾಮ ಎಷ್ಟು ಭೀಕರವಾಗಿರಬಹುದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಅಕ್ರಮ ಸಂಬಂಧ, ಅನುಮಾನ, ದ್ವೇಷ ಮತ್ತು ಕ್ಷಣಿಕ ಆವೇಶದ ಪರಿಣಾಮವಾಗಿ ಅಮಾಯಕ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಮತ್ತೊಂದೆಡೆ, ತನ್ನ ಮಗನ ಶವದ ಮುಂದೆ ಮೂರು ದಿನಗಳ ಕಾಲ ತಾಯಿ ನರಕಯಾತನೆ ಅನುಭವಿಸುವಂತಹ ಹೃದಯವಿದ್ರಾವಕ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನ ಪದ್ಮನಾಭನಗರದ ಎಸ್‌ಎಸ್‌ಆರ್‌ಕೆ ತುಳಸಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಈ ಘಟನೆ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದ ಸುದೀಪ್, ತನ್ನ ಸಂಸಾರವನ್ನು ಬಿಟ್ಟು ಸೀಮಾ ಎಂಬ ಮಹಿಳೆಯೊಂದಿಗೆ ವಾಸಿಸುತ್ತಿದ್ದ ಎನ್ನಲಾಗಿದೆ. ಸೀಮಾಗೂ ಮದುವೆಯಾಗಿ ಮಗನಿದ್ದ. ಬ್ಯಾಂಕ್‌ನಲ್ಲಿ ಪರಿಚಯವಾದ ಇವರಿಬ್ಬರ ನಡುವೆ ಬೆಳೆದ ಸಂಬಂಧ ಕೊನೆಗೆ ಒಂದೇ ಸೂರಿನಡಿ ಜೀವನ ನಡೆಸುವ ಹಂತಕ್ಕೆ ತಲುಪಿತ್ತು.

ಆದರೆ, ಈ ಸಂಬಂಧದಲ್ಲಿಯೂ ಅನುಮಾನದ ವಿಷ ಬೀಜ ಮೊಳಕೆಯೊಡೆದಿತ್ತು. ಸೀಮಾ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಸುದೀಪ್ ಮನೆ ಬಿಟ್ಟು ಹೋಗಿದ್ದ. ಸುಮಾರು ಐದಾರು ತಿಂಗಳು ಕಳೆದರೂ ಸೀಮಾ ತನ್ನನ್ನು ಸಂಪರ್ಕಿಸಿಲ್ಲ ಎಂಬ ಕಾರಣವೂ ಆತನಲ್ಲಿ ದ್ವೇಷವನ್ನು ಹೆಚ್ಚಿಸಿತ್ತು ಎನ್ನಲಾಗಿದೆ. ಇತ್ತೀಚೆಗೆ ಮತ್ತೆ ಮನೆಗೆ ಮರಳಿದ ಬಳಿಕವೂ ಜಗಳ ಮುಂದುವರಿದಿತ್ತು.

ನವೆಂಬರ್ 16ರಂದು ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಕೋಪದ ಭರದಲ್ಲಿ ಸುದೀಪ್ ಸೀಮಾಳ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿ, ಆಕೆಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಬಳಿಕ ಮನೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಪರಾರಿಯಾಗಿದ್ದಾನೆ. ಘಟನೆಯ ನಂತರ ಸತತ ಮೂರು ದಿನಗಳ ಕಾಲ ತಾಯಿ ಮತ್ತು ಮಗ ಮನೆಯೊಳಗೇ ಉಳಿದಿದ್ದರು.

ಮೂರು ದಿನಗಳ ಕಾಲ ಮನೆಯಿಂದ ಯಾರೂ ಹೊರಬಾರದಿದ್ದನ್ನು ಗಮನಿಸಿದ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಹಾಗೂ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಗಿಲು ತೆರೆದು ಒಳಗೆ ಪ್ರವೇಶಿಸಿದಾಗ ಬಾತ್‌ರೂಂನಲ್ಲಿ ಬಾಲಕನ ಶವ ಪತ್ತೆಯಾಗಿದ್ದು, ತೀವ್ರ ರಕ್ತಸ್ರಾವದಿಂದ ಸೀಮಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಲ್ಲಿ ಪ್ರಶ್ನೆ ಇರುವುದು ಕೇವಲ ಒಂದು ಕೊಲೆ ಅಥವಾ ಒಂದು ಕುಟುಂಬದ ದುರಂತದ ಬಗ್ಗೆಯಲ್ಲ. ಶಿಕ್ಷಣ, ತಿಳುವಳಿಕೆ ಮತ್ತು ಸಮಾಜದಲ್ಲಿ ಬದುಕುವ ಅನುಭವವಿರುವವರೇ ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲಾಗದೆ ಇಂತಹ ಕ್ರೂರ ಕೃತ್ಯಗಳಿಗೆ ಇಳಿದರೆ, ಇನ್ನು ತಿಳುವಳಿಕೆಯ ಕೊರತೆಯಿರುವವರ ಪರಿಸ್ಥಿತಿ ಏನು ಎಂಬ ಆತಂಕ ಮೂಡುತ್ತದೆ. ಅಕ್ರಮ ಸಂಬಂಧ ಹೊಂದುವುದು, ಸಂಸಾರಗಳನ್ನು ಅರ್ಧಕ್ಕೆ ಕೈಬಿಡುವುದು, ಪರಸ್ಪರ ಅನುಮಾನ ಪಡುವುದು ಇವೆಲ್ಲ ವೈಯಕ್ತಿಕ ಬದುಕಿನ ವಿಚಾರಗಳಾಗಿರಬಹುದು. ಆದರೆ ತಮ್ಮ ನಡುವಿನ ಭಿನ್ನಾಭಿಪ್ರಾಯಕ್ಕೆ ಏನೂ ಅರಿಯದ ಅಮಾಯಕ ಮಕ್ಕಳನ್ನು ಬಲಿಪಶು ಮಾಡುವ ಹಕ್ಕು ಯಾರಿಗೂ ಇಲ್ಲ.

ಒಬ್ಬ ವ್ಯಕ್ತಿಯ ಕೋಪ, ಅನುಮಾನ ಮತ್ತು ದ್ವೇಷಕ್ಕೆ ಆ ಬಾಲಕ ಮಾಡಿದ ತಪ್ಪಾದರೂ ಏನು? ದೊಡ್ಡವರ ಸಂಬಂಧಗಳ ಸಂಘರ್ಷಕ್ಕೆ ಮಕ್ಕಳ ಜೀವವನ್ನೇ ಬಲಿ ಪಡೆಯುವುದು ಯಾವ ನ್ಯಾಯ? ಕ್ಷಣಿಕ ಆವೇಶದಲ್ಲಿ ಕೈಗೊಳ್ಳುವ ನಿರ್ಧಾರಗಳು ಕೇವಲ ಒಬ್ಬ ವ್ಯಕ್ತಿಯ ಬದುಕನ್ನಷ್ಟೇ ಅಲ್ಲ, ಇಡೀ ಕುಟುಂಬದ ಭವಿಷ್ಯವನ್ನೇ ಕತ್ತಲೆಗೆ ತಳ್ಳುತ್ತವೆ ಎಂಬುದಕ್ಕೆ ಈ ಘಟನೆ ಕಹಿ ಸಾಕ್ಷಿಯಾಗಿದೆ.

ಸಂಬಂಧಗಳು, ಸಂಸಾರ ಮತ್ತು ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಅವುಗಳಿಗೆ ಹಿಂಸೆ ಅಥವಾ ಕೊಲೆ ಎಂದಿಗೂ ಪರಿಹಾರವಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮಕ್ಕಳ ಸುರಕ್ಷತೆ ಮತ್ತು ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕಿದೆ. ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗಬೇಕು.

ADVERTISEMENT