ಹಿರೇಮಠದ ವಿರುದ್ಧ ಅಪಪ್ರಚಾರ ಖಂಡಿಸಿ ನವಲಗುಂದದಲ್ಲಿ ಬೃಹತ್ ಪ್ರತಿಭಟನೆ: ತಪ್ಪಿತಸ್ಥರ ಗಡಿಪಾರಿಗೆ ಆಗ್ರಹ

Spread the love

ನವಲಗುಂದ: ಪಟ್ಟಣದ ಐತಿಹಾಸಿಕ ಪಂಚಗ್ರಹ ಹಿರೇಮಠ ಹಾಗೂ ಮಠದ ಶ್ರೀಗಳ ವಿರುದ್ಧ ಕೆಲವರು ನಡೆಸುತ್ತಿರುವ ಅಪಪ್ರಚಾರವನ್ನು ಖಂಡಿಸಿ ತಾಲೂಕಿನ ಸಾವಿರಾರು ಮಠದ ಭಕ್ತರು ಮಂಗಳವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

​ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಹಿರಿಯರಾದ ಅಂದಾನಯ್ಯ ಹಿರೇಮಠ, ಅಣ್ಣಪ್ಪ ಬಾಗಿ, ವಿರೇಶ ಸೊಬರದಮಠ, ಶ್ರೀಶೈಲ ಮೂಲಿಮನಿ, ಉಸ್ಮಾನ ಬಬರ್ಚಿ ಹಾಗೂ ವಿ.ಟಿ. ಕರಿಸಕ್ರಣ್ಣವರ ಅವರು, ಪಂಚಗ್ರಹ ಹಿರೇಮಠವು ಕಳೆದ ಹಲವಾರು ವರ್ಷಗಳಿಂದ ಅನ್ನ ಹಾಗೂ ಅಕ್ಷರ ದಾಸೋಹ ನಡೆಸುತ್ತಾ ಬಂದಿದ್ದು, ಭವ್ಯ ಪರಂಪರೆಯನ್ನು ಹೊಂದಿದೆ ಎಂದು ಸ್ಮರಿಸಿದರು. ಪ್ರಸ್ತುತ ಪೀಠಾಧ್ಯಕ್ಷರಾಗಿರುವ ಶ್ರೀ ಸಿದ್ದೇಶ್ವರ ಶ್ರೀಗಳು ಕಳೆದ 34 ವರ್ಷಗಳಿಂದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಲ್ಲದೇ, 6 ಶಾಖಾ ಮಠಗಳನ್ನು ನಿರ್ಮಿಸಿ ತಾಲೂಕಿನಾದ್ಯಂತ ಆಧ್ಯಾತ್ಮ ಮತ್ತು ಪ್ರವಚನಗಳ ಮೂಲಕ ಮನುಕುಲವನ್ನು ಮುನ್ನಡೆಸುತ್ತಾ ಬಂದಿದ್ದಾರೆ. ನವಲಗುಂದ ಪಟ್ಟಣದಲ್ಲಿ ಶಂಕರ ಕಾಲೇಜು ನಿರ್ಮಿಸಲು ಮಠದಿಂದ 40 ಎಕರೆ ಜಮೀನನ್ನು ದಾನವಾಗಿ ನೀಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಶ್ರೀಮಠ ಸಾಕ್ಷಿಯಾಗಿದೆ ಎಂದು ಮಠದ ಕೊಡುಗೆಯನ್ನು ವಿವರಿಸಿದರು.

​ಶ್ರೀಗಳು ತಮ್ಮ ಅನಾರೋಗ್ಯದ ದೃಷ್ಟಿಯಿಂದ ಹಾಗೂ ಜಗದ್ಗುರು ಪಂಚ ಪೀಠಾಧೀಶರ ಸೂಚನೆಯ ಮೇರೆಗೆ ನೂತನ ಉತ್ತರಾಧಿಕಾರಿಯನ್ನು ನೇಮಕ ಮಾಡಲು ತೀರ್ಮಾನಿಸಿದ್ದು, ಇದಕ್ಕೆ ತಾಲೂಕಿನ ಸಮಸ್ತ ಭಕ್ತರ ಬೆಂಬಲವಿದೆ. ಆದಾಗ್ಯೂ, ಮಠದ ಏಳಿಗೆಯನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮಠದ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ಭಕ್ತರಲ್ಲಿ ತೀವ್ರ ನೋವುಂಟುಮಾಡಿದೆ. ಇಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಅವರನ್ನು ಗಡಿಪಾರು ಮಾಡಬೇಕೆಂದು ಮುಖಂಡರು ಒತ್ತಾಯಿಸಿದರು. ಇದೇ ವೇಳೆ, ಪಂಚಪೀಠದ ಜಗದ್ಗುರುಗಳು ಸೂಚಿಸಿದ ದಿನಾಂಕದಂದು ಶ್ರೀಮಠಕ್ಕೆ ನೂತನ ಉತ್ತರಾಧಿಕಾರಿಗಳನ್ನು ನೇಮಕ ಮಾಡಲು ಸೇರಿದ ಜನಸ್ತೋಮ ಸರ್ವಾನುಮತದಿಂದ ಕೈ ಎತ್ತುವ ಮೂಲಕ ತಮ್ಮ ಒಪ್ಪಿಗೆಯನ್ನು ಸೂಚಿಸಿತು.

​ಪ್ರತಿಭಟನೆಯಲ್ಲಿ ಪ್ರಮುಖರಾದ ಪಾಂಡಪ್ಪ ಕೋನರಡ್ಡಿ, ಎಂ.ಡಿ. ಕುಲಕರ್ಣಿ, ಸಿದ್ದಲಿಂಗಯ್ಯ ಹಿರೇಮಠ, ಶರ್ಮಾ ಹಿರೇಮಠ, ಶಿವಪ್ಪ ದುತಾರಿ, ಮರಿತಮ್ಮಪ್ಪ ಹಳ್ಳದ, ದೇವೇಂದ್ರಪ್ಪ ಹಳ್ಳದ, ಕೊಟ್ರೇಶ್ ಹಿರೇಮಠ, ಅಪ್ಪಣ್ಣ ಹಿರಗಣ್ಣವರ, ಯಲ್ಲಪ್ಪ ಭೋವಿ, ಮಲ್ಲಿಕಾರ್ಜುನ ಜಲಾದಿ, ಅಂದಾನಯ್ಯ ಕುಲಕರ್ಣಿ, ಬಾಬಾಜಾನ ಮುಲ್ಲಾ, ಸೈಪುದ್ದೀನ್ ಅವರಾದಿ, ಅಬ್ಬಾಸ್ ದೇವರಿಡು ಸೇರಿದಂತೆ ಪುರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *