
ಧಾರವಾಡ ನ.12: ಹುಬ್ಬಳ್ಳಿ–ಧಾರವಾಡ ನಡುವಿನ ಅತ್ಯಂತ ಮಹತ್ವದ 30.60 ಕಿಲೋಮೀಟರ್ ಉದ್ದದ ಷಟ್ಪಥ (ಆರು ಲೇನ್) ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಕಾಮಗಾರಿಯನ್ನು ಮಾರ್ಚ್ 2026ರೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ನವೆಂಬರ್ 12ರಂದು ಮಧ್ಯಾಹ್ನ ನರೇಂದ್ರ ಟೋಲ್‌ನಿಂದ ಆರಂಭವಾಗುವ ಬೈಪಾಸ್ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಮಾಹಿತಿಯನ್ನು ನೀಡಿದರು.
ರೂ. 580 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆ ಮೂಲತಃ ಸೆಪ್ಟೆಂಬರ್ 2025ರೊಳಗೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಪ್ರಸ್ತುತ ಕಾಮಗಾರಿಯು ಕೇವಲ ಶೇ. 73.89 ರಷ್ಟು ಪ್ರಗತಿ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಮಾರ್ಚ್ 2026ರವರೆಗೆ ಕಾಲಾವಕಾಶ ವಿಸ್ತರಣೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಕಾಮಗಾರಿಯು ಇದೀಗ ವೇಗವಾಗಿ ಸಾಗುತ್ತಿದ್ದು, ಉಳಿದ ಶೇ. 15 ರಷ್ಟು ಪ್ರಮುಖ ಕೆಲಸಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಈ ಯೋಜನೆಯಡಿ ರಸ್ತೆ ಅಗಲೀಕರಣ, ಸೇತುವೆ ನಿರ್ಮಾಣ ಹಾಗೂ ಮಳೆನೀರು ನಿರ್ವಹಣಾ ಕಾಮಗಾರಿಗಳು ಒಳಗೊಂಡಿವೆ. ಈಗಾಗಲೇ 62 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಸ್ಥಳೀಯ ರೈತರ ಬೇಡಿಕೆಯನ್ನು ಪರಿಗಣಿಸಿ ಕೆಲವು ಸ್ಥಳಗಳಲ್ಲಿ ಸರ್ವಿಸ್ ರಸ್ತೆಗಳ ಅಗಲೀಕರಣ ಮಾಡಲಾಗುತ್ತಿದೆ. ಮಳೆನೀರು ಹೆಚ್ಚಾಗಿ ಹರಿಯುವ ಪ್ರದೇಶಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು, ಇದರಿಗಾಗಿ ಹೆಚ್ಚುವರಿ 23 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ ಎಂದು ಅವರು ವಿವರಿಸಿದರು.
ಜಿಲ್ಲಾಡಳಿತವು ಕಾಮಗಾರಿಯ ಪ್ರಗತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಗುಣಮಟ್ಟ ಕಾಪಾಡಲು ಹಾಗೂ ಹಾನಿಗೊಳಗಾದ ಭಾಗಗಳನ್ನು ತಕ್ಷಣ ಸರಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ತಾಂತ್ರಿಕ ಅಥವಾ ನಿರ್ಮಾಣ ಸಂಬಂಧಿತ ಸಮಸ್ಯೆಗಳು ಎದುರಾದರೆ ಅವುಗಳನ್ನು ತಕ್ಷಣ ಬಗೆಹರಿಸಲು ಹಾಗೂ ರಸ್ತೆ ನಿರ್ಮಾಣದಲ್ಲಿ ಗುಣಮಟ್ಟವನ್ನು ಕಾಪಾಡುವುದು ಅತ್ಯಂತ ಅವಶ್ಯಕ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಅಧಿಕಾರಿ ದೇವರಾಜ ಆರ್., ಯೋಜನಾ ನಿರ್ದೇಶಕ ಭುವನೇಶಕುಮಾರ, ಧಾರವಾಡ ತಹಶೀಲ್ದಾರ್ ಡಾ. ಡಿ.ಎಚ್. ಹೂಗಾರ, ಗುತ್ತಿಗೆದಾರ ಕಂಪನಿಯ ಯೋಜನಾ ನಿರ್ದೇಶಕ ಮನೋಜ್ ತಿವಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

