
ಹುಬ್ಬಳ್ಳಿ, ಡಿ. 13: ವಿಧಾನ ಪರಿಷತ್ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ಅವರ 45 ವರ್ಷಗಳ ರಾಜಕೀಯ ಸೇವೆಯನ್ನು ಗುರುತಿಸಿ ಇಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆದ ಗೌರವ ಸನ್ಮಾನ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಿ, ಹೊರಟ್ಟಿಯವರ ಅಪರೂಪದ ವ್ಯಕ್ತಿತ್ವ ಮತ್ತು ರಾಜಕೀಯ ನೈಪುಣ್ಯತೆಯನ್ನು ಮನಸಾರೆ ಶ್ಲಾಘಿಸಿದರು.
ಸಮಾರಂಭದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಹೊರಟ್ಟಿಯವರನ್ನು ‘ಹ್ಯಾಂಡ್‌ಸಮ್ ಟೀಚರ್ ಅಂಡ್ ಇಂಟಲಿಜೆಂಟ್ ಪೊಲಿಟಿಷಿಯನ್ ಮತ್ತು ಸಿನ್ಸಿಯರ್ ಫೈಟರ್’ ಎಂದು ಬಣ್ಣಿಸಿದರು. “ನಮ್ಮ ಹೊರಟ್ಟಿ ಮಾಸ್ತರು ಪ್ರತಿಯೊಬ್ಬ ಶಿಕ್ಷಕರ ಹೃದಯದಲ್ಲಿ ಶಾಶ್ವತ ಸ್ಥಾನ ಮಾಡಿದ್ದಾರೆ. ವಿಧಾನ ಪರಿಷತ್ತಿನಲ್ಲಿ ನಲವತ್ತೈದು ವರ್ಷ ಇದ್ದರೆ, ಶಿಕ್ಷಕರ ಹೃದಯದಲ್ಲಿ ಶಾಶ್ವತ ಸ್ಥಾನ ಮಾಡಿದ್ದಾರೆ. ಅಂತ ಅಪರೂಪದ ವ್ಯಕ್ತಿತ್ವದ ಹೊರಟ್ಟಿಯವರಿಗೆ ಸಾವಿರಾರು ಅಭಿನಂದನೆಗಳು,” ಎಂದು ನುಡಿದರು. ಹೊರಟ್ಟಿ ಸರ್ ಮಣ್ಣಿನ ಮಗ ಅವರು ತಮ್ಮತನದ ಅಭಿಮಾನವನ್ನು ಎಂದೂ ಬಿಟ್ಟಿಲ್ಲ. ಅವರ ಯಶಸ್ಸಿನ ಗುಟ್ಟು ಅವರ ಸ್ವಾಭಿಮಾನ. ಅವರು ಎಂದೂ ಸ್ವಾಭಿಮಾನದಲ್ಲಿ ರಾಜಿ ಮಾಡಿಕೊಂಡಿಲ್ಲಾ, ಹೀಗಾಗಿ ಅವರದು ಸ್ವಾಭಿಮಾನ ಭರಿತ ವ್ಯಕ್ತಿತ್ವ ಎಂದು ಬೊಮ್ಮಾಯಿ ಹೇಳಿದರು.
ಜಗಳದ ನಡುವೆಯೂ ಸ್ನೇಹ ಉಳಿಸಿಕೊಂಡ ನಾಯಕ
ಬಸವರಾಜ ಹೊರಟ್ಟಿಯವರು ಎಂಎಲ್‌ಸಿ ಆಗುವ ಮುಂಚೆಯೇ ತಮ್ಮ ಮಾವ ಕೆ.ವಿ ಶಂಕರ ಗೌಡರ ಮೂಲಕ ಪರಿಚಯವಿದ್ದರು ಎಂದು ನೆನಪಿಸಿಕೊಂಡ ಬೊಮ್ಮಾಯಿ, 1980 ರಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಮಾತ್ರ ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದು. ಅದಾದ ಮೇಲೆ ಅವರನ್ನು ಅಜಾತ ಶತ್ರು ಎಂದು ಕರೆಯಲು, ಮುಂದಿನ ಏಳು ಚುನಾವಣೆಗಳನ್ನು ನಾವು ಅವರ ಜೊತೆಗೇ ಮಾಡಿದ್ದೇವೆ. ಅವರದ್ದು ಅಂತಹ ವ್ಯಕ್ತಿತ್ವ. ಹೊರಟ್ಟಿಯವರು ಶಿಕ್ಷಕರ ವಿಚಾರದಲ್ಲಿ ಎಷ್ಟು ಕಠೋರವಾಗಿದ್ದರು ಎಂದರೆ, ಅದನ್ನು ಸಾಧಿಸುವವರೆಗೂ ಬಿಡುತ್ತಿರಲಿಲ್ಲ. ಅದಕ್ಕಾಗಿ ಮುಖ್ಯಮಂತ್ರಿಗಳ ಜೊತೆ ಜಗಳವನ್ನೂ ಆಡುತ್ತಿದ್ದರು. ಅವರು ಜಗಳ ಆಡದೇ ಇರುವ ಮುಖ್ಯಮಂತ್ರಿಗಳೇ ಇಲ್ಲ. ಜಗಳ ಆಡಿಯೂ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುತ್ತಿದ್ದರು. “ಈ ಥರದ ರಾಜಕಾರಣದಲ್ಲಿ ಬಹಳ ಕಷ್ಟ. ಏಕೆಂದರೆ ಒಮ್ಮೆ ಜಗಳಾಡಿದರೆ ಮುಖ ನೋಡುವುದಿಲ್ಲ. ಅಂತಹ ಕಾಲದಲ್ಲಿ ಅವರು ತಮ್ಮ ಸ್ನೇಹವನ್ನು ಎಂದೂ ಕೂಡ ಬಿಟ್ಟಿಲ್ಲ. ಸ್ವಾಭಿಮಾನ ಮತ್ತು ಸ್ನೇಹ ಎರಡನ್ನೂ ಜೊತೆ ಜೊತೆಗೆ ತೆಗೆದುಕೊಂಡು ಹೋಗಿರುವ ನೈಪುಣ್ಯತೆ ಬಸವರಾಜ ಹೊರಟ್ಟಿಯವರಿಗೆ ಇದೆ,” ಎಂದು ಬೊಮ್ಮಾಯಿ ಪ್ರಶಂಸಿಸಿದರು.
ಕಳಸಾ ಬಂಡೂರಿ ಹೋರಾಟ ಮತ್ತು ಸಭಾಪತಿ ಆಯ್ಕೆ ಪ್ರಸಂಗ
ತಮ್ಮ ನೀರಾವರಿ ಸಚಿವ ಅವಧಿಯಲ್ಲಿ ಹೊರಟ್ಟಿಯವರು ತಮ್ಮ ಊರು ಯಡಳ್ಳಿಯಲ್ಲಿ ಸವಳು ಜವಳು ಸಮಸ್ಯೆಯಿಂದ ರೈತರಿಗೆ ತೊಂದರೆಯಾಗುತ್ತಿರುವುದನ್ನು ಗಮನಕ್ಕೆ ತಂದ ಕಾರಣದಿಂದಲೇ ಸವಳು ಜವಳು ಕಾರ್ಯಕ್ರಮವನ್ನು ರೂಪಿಸುವಂತಾಯಿತು ಎಂದು ಬೊಮ್ಮಾಯಿ ಸ್ಮರಿಸಿದರು. ಕಳಸಾ ಬಂಡೂರಿ ಹೋರಾಟದ ಪಾದಯಾತ್ರೆ ಮಾಡುವಾಗ ಅವರು ಬೇರೆ ಪಕ್ಷದಲ್ಲಿದ್ದರೂ ನವಲಗುಂದಕ್ಕೆ ಬಂದು ನಮ್ಮ ಬೆನ್ನು ಚಪ್ಪರಿಸಿ ಬೆಂಬಲ ಕೊಟ್ಟಿದ್ದು ನಾವು ಎಂದೂ ಮರೆಯುವುದಿಲ್ಲ. ಹೊರಟ್ಟಿಯವರನ್ನು ಸಭಾಪತಿ ಮಾಡುವ ಸಂದರ್ಭದಲ್ಲಿ, ತಾವು ಕಾನೂನು ಸಚಿವ ಆಗಿದ್ದದ್ದು ಬಹಳಷ್ಟು ಸಹಾಯ ಆಯಿತು. “ನಮ್ಮಲ್ಲಿ ಕೆಲವರು ಬೇರೆ ಬೇರೆ ಹೆಸರು ತರುತ್ತಿದ್ದರು. ನಾವು ಬಸವರಾಜ ಹೊರಟ್ಟಿಯವರನ್ನು ಸಭಾಪತಿ ಮಾಡದಿದ್ದರೆ ಸಿದ್ದರಾಮಯ್ಯ ಅವರನ್ನು ಸಭಾಪತಿ ಮಾಡುತ್ತಾರೆ, ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಬಳಕೆ ಮಾಡಿ ಹೊರಟ್ಟಿ ಅವರನ್ನು ಸಭಾಪತಿ ಮಾಡಿದೆವು. ಸ್ನೇಹದ ಮುಂದೆ ರಾಜಕಾರಣ ಗೌಣ ಆಗುತ್ತದೆ,” ಎಂದು ಬೊಮ್ಮಾಯಿ ಹೇಳಿದರು.
ಅವರ ವ್ಯಕ್ತಿತ್ವದ ಬಗ್ಗೆ ಹೇಳಬೇಕೆಂದರೆ ಹೊರಟ್ಟಿ ಚಂದುಳ್ಳ ಚಲುವ, ಅವರ ಹಳೆ ಫೋಟೋ ನೋಡಿದರೆ ನಮಗೆಲ್ಲಾ ಅಸೂಯೆ ಆಗುತ್ತದೆ. ಅವರು ದೇವರು ಅವರಿಗೆ ಶತಾಯುಷಿ ಮಾಡಲಿ ಎಂದು ಬೊಮ್ಮಾಯಿ ಹಾರೈಸಿದರು. ಹೊರಟ್ಟಿಯವರ ಈ ಪಯಣ ನಿರಂತರ ನಡೆಯಲಿ. ಅವರು ನಮ್ಮ ಮಧ್ಯೆ ಇದ್ದು ನಮಗೆಲ್ಲಾ ಮಾರ್ಗದರ್ಶನ ಮಾಡಲಿ. ಉತ್ತರ ಕರ್ನಾಟಕದ ಧ್ವನಿಯಾಗಿ ಸದಾಕಾಲ ಕೆಲಸ ಮಾಡಿದ್ದಾರೆ. “ಅವರು ಮುಂದೆ ಇದ್ದರೆ ನಾವೆಲ್ಲ ಅವರ ಜೊತೆಗೆ ಹೆಜ್ಜೆಗೆ ಹೆಜ್ಜೆ ಇಟ್ಟು ಕರ್ನಾಟಕವನ್ನು ವಿಶೇಷವಾಗಿ ಉತ್ತರ ಕರ್ನಾಟಕವನ್ನು ಎಲ್ಲ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಸಂಕಲ್ಪ ಮಾಡೋಣ,” ಎಂದು ಬೊಮ್ಮಾಯಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಭಾಪತಿ ಬಸವರಾಜ ಹೊರಟ್ಟಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

