
ನವಲಗುಂದ: ಸಾಧಕರಿಗೆ ಸನ್ಮಾನ ಹಾಗೂ ಪುರಸ್ಕಾರ ನೀಡುವುದರಿಂದ ಸಮಾಜಮುಖಿಯಾಗಿ ಇನ್ನಷ್ಟು ಸೇವೆ ಸಲ್ಲಿಸಲು ಪ್ರೇರಣೆ ದೊರೆಯುತ್ತದೆ. ಇಂತಹ ಸನ್ಮಾನಗಳು ಸಾಧಕರ ಸಾಧನೆಯನ್ನು ಇತರರಿಗೆ ಮಾದರಿಯಾಗಿ ರೂಪಿಸಿ, ಯುವಜನರಲ್ಲಿ ಹೊಸ ಉತ್ಸಾಹ ತುಂಬುತ್ತವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ.ಬಿ. ಬಾಗಡಿ ಹೇಳಿದರು.
ಅವರು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರೊ. ಬಸವರಾಜ ಸೂಡಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಪ್ರೊ. ಬಸವರಾಜ ಸೂಡಿಯವರು “ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಳಕೆದಾರರು” ಎಂಬ ವಿಷಯದ ಕುರಿತು ಸಂಶೋಧನಾ ಮಹಾ ಪ್ರಬಂಧವನ್ನು ಮಂಡಿಸಿದಕ್ಕಾಗಿ ಮಧ್ಯಪ್ರದೇಶದ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿಯನ್ನು ಪಡೆದು ಗೌರವಿಸಲ್ಪಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಪ್ರೊ. ಬಸವರಾಜ ಸೂಡಿಯವರ ಈ ಸಾಧನೆ ಯುವಜನರಿಗೆ ಸ್ಫೂರ್ತಿಯಾಗಬೇಕು ಹಾಗೂ ಪ್ರೇರಣೆಯಾಗಬೇಕು ಎಂದು ತಿಳಿಸಿದ ಅವರು, ಪ್ರತಿಯೊಬ್ಬ ವ್ಯಕ್ತಿಯು ದೊಡ್ಡ ಕನಸುಗಳನ್ನು ಹೊಂದಿರುತ್ತಾನೆ. ಆದರೆ ಆ ಕನಸುಗಳನ್ನು ನನಸಾಗಿಸಲು ಸತತ ಶ್ರಮ ಹಾಗೂ ಪರಿಶ್ರಮ ಅತ್ಯಂತ ಮುಖ್ಯವಾಗುತ್ತದೆ ಎಂದರು.
ಸತತ ಪ್ರಯತ್ನ, ಸಾಧಿಸುವ ಛಲ ಹಾಗೂ ದೃಢ ಸಂಕಲ್ಪವು ವ್ಯಕ್ತಿಯನ್ನು ಜೀವನದ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಪೋಷಕರ ಸಹಕಾರ ಮತ್ತು ಹಿತೈಷಿಗಳ ಆಶೀರ್ವಾದ ಮೇಳೈಸಿದರೆ ಎಷ್ಟೇ ಕಷ್ಟಗಳು ಎದುರಾದರೂ ದಾಖಲೆ ಸೃಷ್ಟಿಸುವ ಸಾಧನೆಗಳನ್ನು ಮಾಡಬಹುದು ಎಂದು ಡಾ. ಬಾಗಡಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಂತೋಷ್ ಹುಬ್ಬಳ್ಳಿ, ಬಿ.ವಿ. ಏಣಗಿ, ಪ್ರವೀಣ್ ದೊಡ್ಡಮನಿ, ಪ್ರಸನ್ನ ಫಂಡರಿ, ಸವಿತಾ ಚಿಕ್ಕಣ್ಣವರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳಾದ ಸಂಜಯ ಗುರಿಕಾರ, ವೀರೇಶ ಕೋಟಗಿ, ಬಸವರಾಜ ಅಣ್ಣಿಗೇರಿ ಹಾಗೂ ವಿದ್ಯಾರ್ಥಿಗಳು ಪ್ರೊ. ಬಸವರಾಜ ಸೂಡಿಯನ್ನು ಅಭಿನಂದಿಸಿದರು.

