
ಹಾವೇರಿ: ರಾಜ್ಯ ಸರ್ಕಾರದ ಒಂದು ಸಾವಿರ ದಿನಗಳ ಆಡಳಿತದ ಸವಿನೆನಪಿಗಾಗಿ ಹಾವೇರಿ ನಗರದ ಹೊರವಲಯದ ಅಜ್ಜಯ್ಯನ ಗುಡಿ ಸಮೀಪ ಇಂದು ಬೃಹತ್ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ ಆಯೋಜಿಸಲಾಗಿದೆ. ಈ ಐತಿಹಾಸಿಕ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಾವೇರಿ ಸೇರಿದಂತೆ ಒಟ್ಟು 9 ಜಿಲ್ಲೆಗಳ 1.23 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ವಿವಿಧ ಕಂದಾಯ ಹಕ್ಕುಪತ್ರಗಳನ್ನು ವಿತರಿಸಲಿದ್ದಾರೆ. ಹಲವು ದಶಕಗಳಿಂದ ದಾಖಲೆ ರಹಿತವಾಗಿ ಪಾಡಿ, ಹಟ್ಟಿ ಹಾಗೂ ತಾಂಡಾಗಳಲ್ಲಿ ವಾಸಿಸುತ್ತಿದ್ದ ನಿವಾಸಿಗಳಿಗೆ ಒಡೆತನ ನೀಡುವ ಈ ಕಾರ್ಯಕ್ರಮವು ಜಿಲ್ಲೆಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಲಿದೆ.
ಬೃಹತ್ ಸಿದ್ಧತೆ ಮತ್ತು ವಸತಿ ವ್ಯವಸ್ಥೆ:
ಸುಮಾರು 130 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಸಮಾವೇಶದ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಈ ಹಿಂದೆ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿದ್ದ ಜಾಗದಲ್ಲೇ ಮೂರು ಬೃಹತ್ ಜರ್ಮನ್ ಟೆಂಟ್‌ಗಳನ್ನು ನಿರ್ಮಿಸಲಾಗಿದೆ. 18 ಎಕರೆಯಲ್ಲಿ ನಿರ್ಮಾಣವಾಗಿರುವ ಬೃಹತ್ ವೇದಿಕೆಯ ಮೇಲೆ ಸಚಿವ ಸಂಪುಟದ ಸದಸ್ಯರು ಹಾಗೂ ಜನಪ್ರತಿನಿಧಿಗಳು ಸೇರಿದಂತೆ 200ಕ್ಕೂ ಅಧಿಕ ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಗಣ್ಯರ ಆಗಮನಕ್ಕಾಗಿ ಹಾವೇರಿ ಮೆಡಿಕಲ್ ಕಾಲೇಜು ಆವರಣದಲ್ಲಿ 4 ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ.
1.50 ಲಕ್ಷ ಜನರಿಗೆ ಊಟದ ವ್ಯವಸ್ಥೆ:
ಸಮಾವೇಶಕ್ಕೆ ಆಗಮಿಸುವ ಸುಮಾರು 2 ಲಕ್ಷಕ್ಕೂ ಅಧಿಕ ಜನರಿಗಾಗಿ ಅಚ್ಚುಕಟ್ಟಾದ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿಯ ಅನ್ನಪೂರ್ಣೇಶ್ವರಿ ಕೇಟರ್ಸ್ ವತಿಯಿಂದ 110 ನುರಿತ ಬಾಣಸಿಗರು ರುಚಿಕರವಾದ ಪಲಾವ್, ಮೊಸರನ್ನ, ಲಾಡು, ಬೂಂದಿ ಉಂಡೆ ಹಾಗೂ ಉಪ್ಪಿನಕಾಯಿಯನ್ನು ಸಿದ್ಧಪಡಿಸಿದ್ದಾರೆ. ಊಟ ವಿತರಣೆಗಾಗಿ ವೇದಿಕೆಯ ಎರಡು ಬದಿಗಳಲ್ಲಿ ತಲಾ 120 ಕೌಂಟರ್‌ಗಳನ್ನು ತೆರೆಯಲಾಗಿದ್ದು, 400ಕ್ಕೂ ಅಧಿಕ ಸ್ವಯಂಸೇವಕರು ಊಟ ಬಡಿಸುವ ಜವಾಬ್ದಾರಿ ಹೊತ್ತಿದ್ದಾರೆ. ಬಸ್‌ಗಳ ಚಾಲಕರು ಮತ್ತು ನಿರ್ವಾಹಕರಿಗಾಗಿ ಪ್ರತ್ಯೇಕವಾಗಿ 3 ಸಾವಿರ ಆಹಾರದ ಪಾಕೆಟ್‌ಗಳನ್ನು ಪಾರ್ಕಿಂಗ್ ಸ್ಥಳದಲ್ಲೇ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲಾವಾರು ಫಲಾನುಭವಿಗಳ ವಿವರ:
ಒಟ್ಟು 1,23,000ಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ಹಂಚಿಕೆಯಾಗಲಿದ್ದು, ಅದರಲ್ಲಿ ಹಾವೇರಿ ಜಿಲ್ಲೆಯ 30,204 (ಕಂದಾಯ ದಾಖಲೆ, ಇ-ಸ್ವತ್ತು ಸೇರಿದಂತೆ), ದಾವಣಗೆರೆ ಜಿಲ್ಲೆಯ 20 ಸಾವಿರ, ಶಿವಮೊಗ್ಗ, ಧಾರವಾಡ, ಗದಗ ಮತ್ತು ಕೊಪ್ಪಳ ಜಿಲ್ಲೆಗಳ ತಲಾ 10 ಸಾವಿರ ಫಲಾನುಭವಿಗಳು ಸೇರಿದ್ದಾರೆ. ಉಳಿದಂತೆ ಚಿತ್ರದುರ್ಗದಿಂದ 5,500, ಚಿಕ್ಕಮಗಳೂರಿನಿಂದ 7 ಸಾವಿರ ಹಾಗೂ ಉತ್ತರ ಕನ್ನಡ ಜಿಲ್ಲೆಯ 1 ಸಾವಿರ ಜನರಿಗೆ ಹಕ್ಕುಪತ್ರ ದೊರೆಯಲಿದೆ. “ಬಡವರ ಭೂಮಿಯ ಹಕ್ಕನ್ನು ಖಾತರಿಪಡಿಸುವ ಈ ಸಮಾವೇಶವು ಸರ್ಕಾರದ ಜನಪರ ನಿಲುವಿಗೆ ಸಾಕ್ಷಿಯಾಗಿದೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ತಿಳಿಸಿದ್ದಾರೆ.

