
ಧಾರವಾಡ: ವಿದ್ಯಾಕಾಶಿ ಎಂದೇ ಪ್ರಸಿದ್ಧವಾದ ಧಾರವಾಡ ಜಿಲ್ಲೆಯ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯದಲ್ಲಿ (ಎಯುಡಿ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಶೋಷಿತ ವರ್ಗದ ನೌಕರರನ್ನು ಗುರಿಯಾಗಿಸಿಕೊಂಡು ನಿರಂತರ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿರುವ ಗಂಭೀರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ರವಿಕುಮಾರ ಮಾಳಿಗೇರ ಅವರ ಗೂಂಡಾವರ್ತನೆ ಮತ್ತು ಹಿಟ್ಲರ್ ಸಂಸ್ಕೃತಿಯನ್ನು ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ತೀವ್ರವಾಗಿ ಖಂಡಿಸಿದೆ.
ಆರೋಪಿ ರವಿಕುಮಾರ ಮಾಳಿಗೇರ ಅವರು ಶೋಷಿತ ವರ್ಗದ ನೌಕರರನ್ನು ಅನಾವಶ್ಯಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಬೇಕಾಬಿಟ್ಟಿಯಾಗಿ ಕಿರುಕುಳ ನೀಡುವುದು ಹಾಗೂ ಅಕ್ರಮ ಚಟುವಟಿಕೆಗಳನ್ನು ನಡೆಸುವ ಮೂಲಕ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರಲಾಗಿದೆ. ಈ ಹಿಂಸೆಯನ್ನು ತಾಳಲಾರದೆ ಕೃಷಿ ವಿಶ್ವವಿದ್ಯಾಲಯದ ಎಸ್‌ಸಿ/ಎಸ್‌ಟಿ ನೌಕರರು ಹಲವು ಬಾರಿ ಗೌರವಾನ್ವಿತ ರಾಜ್ಯಪಾಲರ ವಿಶೇಷ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಮತ್ತು ಕುಲಪತಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ.
ರವಿಕುಮಾರ ಮಾಳಿಗೇರ ಅವರು ಈ ಹಿಂದೆ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದಾಗಲೂ ಇದೇ ರೀತಿಯ ದುರ್ಬುದ್ಧಿಯ ಚಾಳಿಯನ್ನು ಮುಂದುವರೆಸಿದ್ದಕ್ಕೆ 01/07/2022 ರಂದು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಂಡಿದ್ದರು. ಆದರೂ ತಮ್ಮ ಬುದ್ಧಿಯನ್ನು ತಿದ್ದಿಕೊಳ್ಳದೇ ಕೃಷಿ ವಿಶ್ವವಿದ್ಯಾಲಯದಲ್ಲಿಯೂ ಸಂಬಂಧವಿಲ್ಲದ ಕಾರ್ಯಗಳಲ್ಲಿ ಅಕ್ರಮವಾಗಿ ಹಸ್ತಕ್ಷೇಪ ಮಾಡುತ್ತಾ ಆಡಳಿತ ಕುಂಠಿತವಾಗುವ ವಾತಾವರಣ ಸೃಷ್ಟಿಸುತ್ತಿದ್ದಾರೆ. ಇದರಿಂದ ಬೇಸತ್ತ ಶೋಷಿತ ವರ್ಗದ ನೌಕರರು ಅಂತಿಮವಾಗಿ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಧಾರವಾಡ ಜಿಲ್ಲಾ ಘಟಕಕ್ಕೇ ಮನವಿ ಸಲ್ಲಿಸಿ ನೈತಿಕ ಬೆಂಬಲ ಕೋರಿದ್ದಾರೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ದಲಿತ ಜಿಲ್ಲಾ ಸಂಘಟನೆಯು, ಕುಲಪತಿಗಳಿಗೆ ಮನವಿ ಸಲ್ಲಿಸಿ, ಆಡಳಿತ ಮಂಡಳಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ರವಿಕುಮಾರ ಮಾಳಿಗೇರ ಅವರನ್ನು ಕೂಡಲೇ ಆಡಳಿತ ಮಂಡಳಿಯಿಂದ ವಜಾ ಮಾಡಲು ಒಂದು ವಾರದ ಗಡುವು ನೀಡಿದೆ. ಈ ಸಂದರ್ಭದಲ್ಲಿ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದದ ಧಾರವಾಡ ಜಿಲ್ಲಾ ಸಂಚಾಲಕರಾದ ಮಂಜುನಾಥ ಶರೇವಾಡ, ಲಕ್ಷ್ಮಣ ದೊಡ್ಡಮನಿ, ಪ್ರಕಾಶ ಸಿದ್ದಪ್ಪನವರ, ಪ್ರವೀಣ ಬೆಳಗಾಂವಕರ, ನಿಂಗರಾಜ ಅದರಕಂಡಿ, ಸಂಜು ಯಲ್ಲಾಪುರ, ರೆಹಮಾನ ನಿಚ್ಚನಿಕಿ ಹಾಗೂ ಹಲವಾರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.

