ಗುಡೇನಕಟ್ಟಿ ಸಾರಾಯಿ ದಂಧೆ: ‘ಶ್ರಾವ್ಯಾ ದಾಬಾ’ ಹೆಸರಿನಲ್ಲಿ ಕಾನೂನಿಗೆ ಸವಾಲು; ಅಧಿಕಾರಿಯ ಕೃಪಾಕಟಾಕ್ಷವೋ ಅಥವಾ ನಿರ್ಲಕ್ಷ್ಯವೋ?

Spread the love

ಕುಂದಗೋಳ: ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದ ಮಂಟೂರ–ಗುಡೇನಕಟ್ಟಿ ರಸ್ತೆಯ ಹೊರವಲಯದಲ್ಲಿರುವ ‘ಶ್ರಾವ್ಯಾ ದಾಬಾ’ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿ ದಂಧೆಯು ಸ್ಥಳೀಯ ಆಡಳಿತದ ವೈಫಲ್ಯವನ್ನು ಬಯಲು ಮಾಡಿದೆ. ಅಬಕಾರಿ ಇಲಾಖೆಯ ಪರವಾನಗಿ ಮಾತ್ರವಲ್ಲದೆ, ಸ್ಥಳೀಯ ಗ್ರಾಮ ಪಂಚಾಯತ್ ಮತ್ತು ಆಹಾರ ಇಲಾಖೆ ಸೇರಿದಂತೆ ಯಾವುದೇ ಸರ್ಕಾರಿ ನಿಯಮಗಳಿಗೂ ತಲೆಬಾಗದೆ, ಸಕಲ ಕಾನೂನುಗಳನ್ನು ಗಾಳಿಗೆ ತೂರಿ ಈ ದಂಧೆ ರಾಜಾರೋಷವಾಗಿ ನಡೆಯುತ್ತಿರುವುದು ಇಡೀ ವ್ಯವಸ್ಥೆಯ ದಕ್ಷತೆ ಬಗ್ಗೆ ಗಂಭೀರ ಸಂಶಯ ಮೂಡಿಸಿದೆ.

ದಂಧೆಕೋರರು ಹೊರಗಿನಿಂದ ಅಗ್ಗದ ಮದ್ಯ ತಂದು ಗ್ರಾಹಕರಿಗೆ ಮನಸೋ ಇಚ್ಛೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ. ಇದರ ನೇರ ಪರಿಣಾಮವಾಗಿ ಗ್ರಾಮದಲ್ಲಿ ಕುಡಿತದ ಚಟ ಹೆಚ್ಚಾಗಿದ್ದು, ಕುಡಿದು ಬರುವ ಗಂಡಸರು ಮನೆಯಲ್ಲಿ ಮಹಿಳೆಯರೊಂದಿಗೆ ಗಲಾಟೆ ಮಾಡುವುದು, ತಮ್ಮ ನೆಮ್ಮದಿ ಹಾಳಾದ ಕಾರಣ ಗ್ರಾಮದ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಹಿಡಿಶಾಪ ಹಾಕುತ್ತಿದ್ದರೂ, ಸರ್ಕಾರಿ ಇಲಾಖೆಗಳು ನಿರ್ಲಕ್ಷ್ಯ ಮುಂದುವರಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ವಿಷಮಗೊಳಿಸಿದೆ.

ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಅತ್ಯಂತ ಗಂಭೀರ ಸಂಶಯಾತ್ಮಕ ಆರೋಪವೆಂದರೆ, ಇಷ್ಟು ಸ್ಪಷ್ಟವಾಗಿ ಕಾನೂನು ಉಲ್ಲಂಘಿಸಿ ಈ ದಂಧೆ ಯಾರ ಭಯವೂ ಇಲ್ಲದೆ ಅವ್ಯಾಹತವಾಗಿ ನಡೆಯಲು ಅಧಿಕಾರಿಗಳಿಗೆ ‘ಲಕ್ಷ್ಮಮ್ಮನ ಕೃಪಾಕಟಾಕ್ಷವೋ ಅಥವಾ ಕೇವಲ ಕರ್ತವ್ಯ ನಿರ್ಲಕ್ಷ್ಯವೋ’ ಎಂಬ ಪ್ರಶ್ನೆ ಎದುರಾಗಿದೆ. ಕಾಣದ ಕೈಗಳ ರಾಜಕೀಯ ಬೆಂಬಲ ಮತ್ತು ಇಲಾಖೆಯ ಅನೈತಿಕ ಸಹಕಾರ ಇಲ್ಲದೆ, ಇಷ್ಟು ದೊಡ್ಡ ಪ್ರಮಾಣದ ಅಕ್ರಮ ವ್ಯವಹಾರವನ್ನು ಸಾರ್ವಜನಿಕ ಸ್ಥಳದಲ್ಲಿ ನಡೆಸುವುದು ಅಸಾಧ್ಯವೆಂಬುದು ಗ್ರಾಮಸ್ಥರ ಬಲವಾದ ವಾದವಾಗಿದೆ.

ದಾಬಾದ ಮಾಲೀಕನೇ ನೀಡಿರುವ ಹೇಳಿಕೆ ಈ ಆರೋಪಗಳಿಗೆ ಮತ್ತಷ್ಟು ಪುಷ್ಟಿ ನೀಡುತ್ತದೆ. ಹಿಂದೆ ಸಂಬಂಧಿಸಿದ ಇಲಾಖೆಯವರು ಭೇಟಿ ನೀಡಿದ್ದರೂ, ಕೇವಲ ನಾಮವಾಸ್ತೆಗೆ ನೂರು ರೂಪಾಯಿ ರಂತೆ ಮೂರ್ನಾಲ್ಕು ರಶೀದಿ ನೀಡಿ ಕೈತೊಳೆದುಕೊಂಡಿದ್ದಾರೆ. ಅಧಿಕಾರಿಗಳು ಕಾನೂನು ಪಾಲನೆ ಮಾಡುವುದಕ್ಕೆ ಬದಲಾಗಿ, ಸಾಂಕೇತಿಕ ದಂಡದ ನೆಪದಲ್ಲಿ ಉತ್ತೇಜನ ನೀಡಿ ನಿಯಮಗಳ ಉಲ್ಲಂಘನೆಗೆ ಅವಕಾಶ ಕಲ್ಪಿಸುತ್ತಿದ್ದಾರೆ ಎಂಬುದಕ್ಕೆ ಇದೇ ಸ್ಪಷ್ಟ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *