
ಕುಂದಗೋಳ: ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಶ್ರೀ ಗ್ರಾಮದೇವತೆಯ 15ನೇ ವರ್ಷದ ಭವ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಜನವರಿ 27 ರಿಂದ ಫೆಬ್ರವರಿ 24ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮದಲ್ಲಿ ಈಗಾಗಲೇ ಶ್ರೀ ತ್ರಿವಿಧ ದಾಸೋಹಿ ಶರಣಬಸವೇಶ್ವರ ಪುರಾಣ ಪ್ರವಚನವು ಪ್ರತಿದಿನ ಸಂಜೆ 7:30 ರಿಂದ ರಾತ್ರಿ 10 ಗಂಟೆಯವರೆಗೆ ಜರುಗುತ್ತಿದ್ದು, ಫೆಬ್ರವರಿ 14 ರಿಂದ ಜಾತ್ರೆಯ ವಿಶೇಷ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.
ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರವರಿ 14 ರಂದು ಸವಾಲ್-ಜವಾಬ್ ಭಜನಾ ಸ್ಪರ್ಧೆ, 15 ರಂದು ಹಗ್ಗಜಗ್ಗಾಟ ಸ್ಪರ್ಧೆ ಹಾಗೂ 16 ಮತ್ತು 17 ರಂದು ಗ್ರಾಮದ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಾಟಕ ಪ್ರದರ್ಶನಗಳು ನಡೆಯಲಿವೆ. ಫೆಬ್ರವರಿ 18 ರಂದು ಗ್ರಾಮಸ್ಥರೆಲ್ಲರೂ ‘ಊರು ಬಿಡುವ’ (ಹೊರಬಿಡಿಕಿ) ಸಂಪ್ರದಾಯ ಆಚರಿಸಲಿದ್ದು, 19 ರಂದು ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ಇರಲಿದೆ. ವಿಶೇಷ ಆಕರ್ಷಣೆಯಾಗಿ ಫೆಬ್ರವರಿ 20 ರಂದು ಮರಳು ತುಂಬಿದ ಟ್ರೇಲರ್ ಜಗ್ಗುವ ಟ್ರ್ಯಾಕ್ಟರ್ ಸ್ಪರ್ಧೆ ಹಾಗೂ 21 ರಂದು ಭವ್ಯ ಟಗರಿನ ಕಾಳಗ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜೇತರಿಗೆ ಆಕರ್ಷಕ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಫೆಬ್ರವರಿ 22 ರಂದು ಕುಂಭಮೇಳ ಹಾಗೂ ವಿವಿಧ ಕಲಾತಂಡಗಳೊಂದಿಗೆ ದೇವಿಯ ಭವ್ಯ ಮೆರವಣಿಗೆ ಜರುಗಲಿದ್ದು, 23 ರಂದು ಮೂರ್ತಿ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ ಮತ್ತು ಚಂಡಿಹೋಮ ನೆರವೇರಲಿದೆ. ಸಮಾರೋಪ ದಿನವಾದ ಫೆಬ್ರವರಿ 24 ರಂದು ದೇವಿಯ ಉಡಿ ತುಂಬುವ ಕಾರ್ಯಕ್ರಮ ಜರುಗಲಿದ್ದು, ಬೆಳಗಾವಿ ಮುಕ್ತಿಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಗಳು ಹಾಗೂ ಕುಂದಗೋಳ ಕಲ್ಯಾಣಪುರ ಮಠದ ಶ್ರೀ ಅಭಿನವ ಬಸವಣ್ಣಜ್ಜನವರು ಸಾನಿಧ್ಯ ವಹಿಸಲಿದ್ದಾರೆ. ಗದಗ ಕದಳಿವನ ಮಠದ ಮಾತೋಶ್ರೀ ಅಕ್ಕಮಹಾದೇವಿ ತಾಯಿ ಅವರು ಪ್ರವಚನ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಶಾಸಕ ಎಂ.ಆರ್. ಪಾಟೀಲ್, ಮಾಜಿ ಶಾಸಕರಾದ ಕುಸುಮಾವತಿ ಶಿವಳ್ಳಿ, ಎಂ.ಎಸ್. ಅಕ್ಕಿ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ ಎಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಎಫ್.ಎನ್. ದುಂಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

