
ಕಲಘಟಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕಲಘಟಗಿ ತಾಲೂಕು ಘಟಕದ ವತಿಯಿಂದ ವಿಜಯದಶಮಿ ಉತ್ಸವವನ್ನು ಭಾನುವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು.
ಪೂರ್ಣ ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನವು ಜೆ.ಇ. ಕಾಲೇಜು ಮೈದಾನದಿಂದ ಆರಂಭವಾಗಿ, ನಗರದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಗರದ ಜನರು ಪಥಸಂಚಲನಕ್ಕೆ ಉತ್ಸಾಹಭರಿತ ಸ್ವಾಗತ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಂಧೀಶ ಪಾಟೀಲ್ ಉಪಸ್ಥಿತರಿದ್ದರು. ವಕ್ತಾರರಾಗಿ ಕರ್ನಾಟಕದ ಉತ್ತರ ಪ್ರಾಂತ ಸೇವಾ ಪ್ರಮುಖರಾದ ಶ್ರೀ ನರಸಿಂಹ ಕುಲಕರ್ಣಿ ಅವರು ಮಾತನಾಡಿ, ಸಂಘದ ಸೇವಾ ಚಟುವಟಿಕೆಗಳು ಹಾಗೂ ಸಾಮಾಜಿಕ ಸಾಮರಸ್ಯದ ಅಗತ್ಯತೆಯನ್ನು ವಿವರಿಸಿದರು.
ಈ ಪಥಸಂಚಲನದಲ್ಲಿ ಒಟ್ಟು 1048 ಸ್ವಯಂಸೇವಕರು ಭಾಗವಹಿಸಿದ್ದರು. ಸಾರ್ವಜನಿಕ ಸಭೆಗೆ ಒಟ್ಟಾರೆ 5000 ಕ್ಕಿಂತ ಹೆಚ್ಚು ಜನರು ಹಾಜರಾಗಿದ್ದರು ಎಂದು ಆಯೋಜಕರು ತಿಳಿಸಿದ್ದಾರೆ.
ತಾಲೂಕು ಕಾರ್ಯವಾಹಕ ರಾಜು ಹೈವತ್ತಿ, ಉಮೇಶ್ ಪಾಟೀಲ್, ಮುತ್ತು ಗಂಜಿಗಟ್ಟಿ, ಮಹೇಶ ಹಳ್ಳಿಗೇರಿ, ಆಕಾಶ ರಾಯನಾಳ, ಕಲ್ಮೇಶ ದರಗುಂಟೆ ಮತ್ತು ರವಿ ಬೋವಿ ಸೇರಿದಂತೆ ಸಂಘದ ಹಲವಾರು ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗೆ ಶ್ರಮವಹಿಸಿದರು.

