
ನವಲಗುಂದ: ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಅಯ್ಯಪ್ಪ ಸ್ವಾಮಿಯ ಮಹಾ ಪೂಜೆ ಹಾಗೂ ಭವ್ಯ ಜ್ಯೋತಿ ಮೆರವಣಿಗೆ ಕಾರ್ಯಕ್ರಮವು ಅತ್ಯಂತ ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ಜರುಗಿತು.
ದಿನದ ಆರಂಭದಲ್ಲಿ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಅಭಿಷೇಕ, ನಯನಮನೋಹರ ಅಲಂಕಾರ ಪೂಜೆ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು. ಮಧ್ಯಾಹ್ನ ಭಕ್ತಾದಿಗಳಿಗಾಗಿ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ವೇಳೆಗೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದ ಜ್ಯೋತಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮಾಲಾಧಾರಿಗಳು ಜ್ಯೋತಿಯನ್ನು ಹೊತ್ತು ಸಾಗಿದರೆ, ಮಹಿಳೆಯರು ಮಂಗಲ ಆರತಿಗಳನ್ನು ಹಿಡಿದು ಮೆರವಣಿಗೆಗೆ ಸಾಥ್ ನೀಡಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಈ ಮೆರವಣಿಗೆಯುದ್ದಕ್ಕೂ ಭಕ್ತರು “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂಬ ಶರಣು ಘೋಷಗಳನ್ನು ಕೂಗುತ್ತಾ, ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿದರು. ಯುವಕರು ಮತ್ತು ಮಾಲಾಧಾರಿಗಳ ನೃತ್ಯ ಮೆರವಣಿಗೆಗೆ ಕಳೆ ತಂದಿತ್ತು. ಈ ಶ್ರದ್ಧಾ ಭಕ್ತಿಯ ಸಮಾರಂಭದಲ್ಲಿ ನೂರಾರು ಸಂಖ್ಯೆಯಲ್ಲಿ ಮಾಲಾಧಾರಿಗಳು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಪಾಲ್ಗೊಂಡು ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾದರು. ಸಂಪೂರ್ಣ ಕಾರ್ಯಕ್ರಮವು ಅತ್ಯಂತ ಶಾಂತಿಯುತವಾಗಿ ಹಾಗೂ ಶಿಸ್ತುಬದ್ಧವಾಗಿ ನೆರವೇರಿತು.

