
ಹುಬ್ಬಳ್ಳಿ: ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆಗಳಂತಹ ಅಮಾನವೀಯ ಕೃತ್ಯಗಳನ್ನು ತಡೆಯಲು ‘ಮಾನ್ಯಾ’ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆಯನ್ನು ಜಾರಿಗೆ ತರುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಲಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಭರವಸೆ ನೀಡಿದರು.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಇತ್ತೀಚೆಗೆ ಮರ್ಯಾದೆಗೇಡು ಹತ್ಯೆಗೆ ಬಲಿಯಾದ ಏಳು ತಿಂಗಳ ಗರ್ಭಿಣಿಯ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಂತ ಕುಟುಂಬದವರಿಂದಲೇ ಈ ರೀತಿ ಹತ್ಯೆ ನಡೆದಿರುವುದು ಅತ್ಯಂತ ಘೋರವಾಗಿದೆ. ಇಂತಹ ಮನುವಾದಿ ಮಾನಸಿಕತೆಯನ್ನು ಹತ್ತಿಕ್ಕಬೇಕಿದ್ದು, ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವವರು ಮಾತ್ರವಲ್ಲದೆ, ಕೃತ್ಯಕ್ಕೆ ಪ್ರಚೋದನೆ ನೀಡಿದವರ ವಿರುದ್ಧವೂ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕರ್ನಾಟಕದಂತಹ ನಾಗರಿಕ ಹಾಗೂ ಪ್ರಗತಿಪರ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ವಿಷಾದನೀಯ. ಯುವಕ-ಯುವತಿಯರು ತಮ್ಮ ಇಚ್ಛೆಯಂತೆ ಯಾವುದೇ ಧರ್ಮ ಅಥವಾ ಜಾತಿಯವರನ್ನು ವಿವಾಹವಾಗುವುದು ಸಂವಿಧಾನ ನೀಡಿರುವ ಮೂಲಭೂತ ಹಕ್ಕಾಗಿದ್ದು, ಅದನ್ನು ಹತ್ತಿಕ್ಕುವ ಅಧಿಕಾರ ಯಾರಿಗೂ ಇಲ್ಲ ಎಂದು ಅವರು ಪ್ರತಿಪಾದಿಸಿದರು. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಮುಂದಿನ ಅಧಿವೇಶನದಲ್ಲಿ ಕಠಿಣ ಕಾನೂನು ರೂಪಿಸುವ ಕುರಿತು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರೊಂದಿಗೆ ಚರ್ಚಿಸುವುದಾಗಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಸಂತ್ರಸ್ತ ಕುಟುಂಬದ ಎಂಟು ಮಂದಿಗೆ ತಲಾ 2 ಲಕ್ಷ ರೂ.ನಂತೆ ಒಟ್ಟು 16 ಲಕ್ಷ ರೂ. ಪರಿಹಾರದ ಚೆಕ್‌ಗಳನ್ನು ಸಚಿವರು ವಿತರಿಸಿದರು. ಒಂದು ವೇಳೆ ಈ ಪ್ರಕರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರೆ, ಅವರ ವಿರುದ್ಧವೂ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು, ಸಚಿವರ ಜೊತೆ ಧಾರವಾಡ ಜಿಲ್ಲಾಧಿಕಾರಿ ಶ್ರೀಮತಿ ದಿವ್ಯಪ್ರಭು, ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯರಾದ ಎಫ್. ಎಚ್. ಜಕ್ಕಪ್ಪನವರ, ನವಲಗುಂದ ಶಾಸಕರಾದ ಎನ್ ಎಚ್ ಕೋನರೆಡ್ಡಿ, ಮಾನ್ಯಾಳ ಪತಿ ವಿವೇಕಾನಂದ ದೊಡ್ಡಮನಿ, ದಲಿತ ಮುಖಂಡರಾದ ಮಂಜುನಾಥ ಶರೇವಾಡ, ಪ್ರಕಾಶ ಸಿದ್ದಪ್ಪನವರ, ಪರಮೇಶ ಕಾಳೆ ಹಾಗೂ ಹಲವಾರು ದಲಿತ ಸಂಘಟನೆಗಳ ಮುಖಂಡರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

