ಮೆಕ್ಕೆಜೋಳ ಖರೀದಿಗೆ ಸರ್ಕಾರ ಬದ್ಧ: ಶಾಸಕ ಮತ್ತು ಜಿಲ್ಲಾಧಿಕಾರಿ ಭರವಸೆ ಹಿನ್ನೆಲೆ; ನವಲಗುಂದ ರೈತರ ಉಪವಾಸ ಸತ್ಯಾಗ್ರಹ ಅಂತ್ಯ

Spread the love

ತಾಂತ್ರಿಕ ಗೊಂದಲ ಶೀಘ್ರ ಇತ್ಯರ್ಥ; ಪರಿಹಾರ ವಿತರಣೆಯಲ್ಲಿ ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ

ಧಾರವಾಡ, ನ. 24: ಕಳೆದ ಮೂರು ದಿನಗಳಿಂದ ನವಲಗುಂದ ಪಟ್ಟಣದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಗೆ ಆಗ್ರಹಿಸಿ ಧರಣಿ ಮತ್ತು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರು, ಶಾಸಕ ಎನ್.ಎಚ್. ಕೋನರಡ್ಡಿ ಮತ್ತು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಭರವಸೆಯ ನಂತರ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದರು.

​ಇಂದು ಬೆಳಿಗ್ಗೆ ಹೋರಾಟ ನಿರತ ರೈತರ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಮತ್ತು ಜಿಲ್ಲಾಧಿಕಾರಿಗಳು, ಸರ್ಕಾರದಿಂದ ಮೆಕ್ಕೆಜೋಳ ಖರೀದಿಸಲು ಸರ್ಕಾರಿ ಮಟ್ಟದಲ್ಲಿ ಚರ್ಚಿಸಿ, ಶೀಘ್ರ ಕ್ರಮ ವಹಿಸಲಾಗುತ್ತಿದೆ ಎಂದು ಮನವಿ ಮಾಡಿದರು. ಅವರ ಮನವಿಯನ್ನು ಪರಿಗಣಿಸಿದ ರೈತರು, ಎಳನೀರು ಸೇವಿಸುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿ, ಧರಣಿಯನ್ನು ಹಿಂಪಡೆದರು.

​💰 ಕೇಂದ್ರದ ಅನುಮತಿ ಬೇಕಿಲ್ಲ, ಖರೀದಿ ಖಚಿತ: ಶಾಸಕ ಕೋನರಡ್ಡಿ

​ಶಾಸಕ ಎನ್.ಎಚ್. ಕೋನರಡ್ಡಿ ಅವರು ಮಾತನಾಡಿ, “ಗೋವಿನಜೋಳ ಖರೀದಿಯ ಬಗ್ಗೆ ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಮಾತನಾಡಿದ್ದೇನೆ. ಕೇಂದ್ರ ಸರ್ಕಾರ ಅನುಮತಿ ಕೊಡಲಿ ಬಿಡಲಿ, ಗೋವಿನಜೋಳ ಖರೀದಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ತಾಂತ್ರಿಕ ಕಾರಣದಿಂದ ಖರೀದಿ ಪ್ರಕ್ರಿಯೆ ತಡವಾಗಿದೆ. ಸಚಿವರಾದ ಹೆಚ್.ಕೆ. ಪಾಟೀಲ ಹಾಗೂ ಚಲುವರಾಯಸ್ವಾಮಿ ಅವರನ್ನು ದೆಹಲಿಗೆ ಕಳಿಸಿ, ಗೊಂದಲಗಳನ್ನು ಸರಿಪಡಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಶೀಘ್ರದಲ್ಲಿ ಖರೀದಿ ಕೇಂದ್ರ ಸ್ಥಾಪಿಸುವ ಭರವಸೆಯನ್ನು ಅವರು ನೀಡಿದರು,” ಎಂದು ತಿಳಿಸಿದರು.

​🎯 ರೈತರ ಸಮಸ್ಯೆ ಗಂಭೀರವಾಗಿ ಪರಿಗಣನೆ: ಜಿಲ್ಲಾಧಿಕಾರಿ ದಿವ್ಯ ಪ್ರಭು

​ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಮೆಕ್ಕೆಜೋಳ ಖರೀದಿಗೆ ಅಗತ್ಯವಿರುವ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಸರ್ಕಾರ ಮಟ್ಟದ ಅಧಿಕಾರಿಗಳು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಈ ವಿಷಯದ ಗಂಭೀರತೆಯ ಅರಿವಿದ್ದು, ಸಕಾಲಕ್ಕೆ ಸಮಸ್ಯೆ ಸರಿಪಡಿಸಲಾಗುವುದು ಎಂದು ತಿಳಿಸಿದರು.

​”ರಾಜ್ಯದಲ್ಲಿಯೇ ಮೊದಲಿಗರಾಗಿ ಧಾರವಾಡ ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ಮಾಡಿ ನವಲಗುಂದ ತಾಲ್ಲೂಕಿಗೆ ಪ್ರಥಮ ಹಂತದಲ್ಲಿ ಪರಿಹಾರ ನೀಡಿದ್ದು, ಇನ್ನೊಂದು ಹಂತದಲ್ಲಿ ಪರಿಹಾರ ಸಿಗಲಿದೆ. ಧಾರವಾಡ ಜಿಲ್ಲೆಯಲ್ಲಿ 95 ಸಾವಿರ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಜಿಲ್ಲಾಡಳಿತವು ಎರಡು ಬಾರಿ ಪಟ್ಟಿಯನ್ನು ಸಿದ್ಧಪಡಿಸಿ, ಅತ್ಯಂತ ಪಾರದರ್ಶಕವಾಗಿ ರೂ. 65 ಕೋಟಿ ಮೊತ್ತವನ್ನು ರೈತರಿಗೆ ಈಗಾಗಲೇ ನೇರವಾಗಿ ಜಮಾ ಮಾಡಿದೆ. ರಾಜ್ಯದಲ್ಲಿಯೇ ರೈತರಿಗೆ ಮೊಟ್ಟಮೊದಲು ಹಣ ಜಮಾ ಮಾಡಿದ ಹೆಮ್ಮೆ ನಮ್ಮ ಜಿಲ್ಲಾಡಳಿತಕ್ಕೆ ಇದೆ,” ಎಂದು ಅವರು ಹೆಮ್ಮೆಯಿಂದ ಹೇಳಿದರು.

​ಕೆಲವು ರೈತರಿಗೆ ಹಣ ಜಮೆಯಾಗದಿರಲು ತಾಂತ್ರಿಕ ಸಮಸ್ಯೆಗಳು ಕಾರಣ. ಈ ಕುರಿತು ಎಲ್ಲ ತಾಲ್ಲೂಕುಗಳ ತಹಶೀಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೈತರಿಗೆ ಯಾವುದೇ ಸಮಸ್ಯೆ ಇದ್ದಲ್ಲಿ ತಹಶೀಲ್ದಾರ್ ಕಚೇರಿ ಅಥವಾ ಜಿಲ್ಲಾಡಳಿತದ ಟೋಲ್ ಫ್ರೀ ನಂಬರಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಡಿಸಿ ತಿಳಿಸಿದರು.

​🌧️ ಹೆಸರುಕಾಳು ಗುಣಮಟ್ಟದಲ್ಲಿ ವ್ಯತ್ಯಾಸ

​ಜಿಲ್ಲೆಯಲ್ಲಿ ಸುಮಾರು 80 ಸಾವಿರ ಹೆಕ್ಟೇರ್ ಹೆಸರು ಬೆಳೆ ಹಾನಿಯಾಗಿದೆ. ಅತಿ ಹೆಚ್ಚು ಮಳೆಯಾಗಿರುವುದರಿಂದ ಎಫ್‌ಎಕ್ಯೂ ಗುಣಮಟ್ಟದಲ್ಲಿ ವ್ಯತ್ಯಾಸ ಆಗಿದ್ದು, ಇದು ಖರೀದಿಗೆ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ ಒಂಬತ್ತು ಸಾವಿರ ರೈತರು ಹೆಸರುಕಾಳು ಮಾರಾಟಕ್ಕೆ ನೋಂದಣಿ ಮಾಡಿದ್ದರೂ, ಗುಣಮಟ್ಟದ ಸಮಸ್ಯೆಯಿಂದ ಕೇವಲ 76 ರೈತರಿಂದ ಮಾತ್ರ ಖರೀದಿಯಾಗಿದೆ. ಈ ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗನೆ ಸಮಸ್ಯೆ ಪರಿಹರಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

​ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಮನವಿಗೆ ಸ್ಪಂದಿಸಿ ಮಾತನಾಡಿದ ರೈತ ಸೇನಾ ರಾಜ್ಯಾಧ್ಯಕ್ಷ ಶಂಕರ ಅಂಬಲಿ ಅವರು, “ನಿಮ್ಮ ಮೇಲೆ ನಂಬಿಕೆ ಇಟ್ಟು ಕಾಲಾವಕಾಶ ನೀಡುತ್ತೇವೆ. ಆದರೆ, ಈ ಭರವಸೆ ಭರವಸೆಯಾಗಿಯೇ ಉಳಿದರೆ ಮತ್ತೆ ಉಗ್ರ ಹೋರಾಟ ಮಾಡುತ್ತೇವೆ,” ಎಂದು ಎಚ್ಚರಿಸಿದರು.

​ಈ ಸಂದರ್ಭದಲ್ಲಿ ರೈತ ಮುಖಂಡರಾದ ಲೋಕನಾಥ ಹೆಬಸೂರು, ರಘುನಾಥ ನಡುವಿನಮನಿ, ರಾಮದುರ್ಗದ ಶಂಕರಗೌಡ ಪಾಟೀಲ, ಆನಂದ ಹವಳಕೋಡ, ದೇವೆಂದ್ರಪ್ಪ ಹಳ್ಳದ, ಜೀವನ ಪವಾರ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಡಿಎಚ್‌ಓ ಡಾ.ಎಸ್.ಎಂ.ಹೊನಕೇರಿ, ತಹಶೀಲ್ದಾರ್ ಸುಧೀರ ಸಾಹುಕಾರ, ಸಿ.ಪಿ.ಐ ರವಿ ಕಪ್ಪತ್ತನವರ, ಡಾ. ರೂಪಾ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *