ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವ ಬರಹಗಾರರಿಗೆ ಸುವರ್ಣಾವಕಾಶ: ಚೊಚ್ಚಲ ಕೃತಿ ಪ್ರಕಟಣೆಗೆ ₹15,000 ಪ್ರೋತ್ಸಾಹಧನ

Spread the love

ಧಾರವಾಡ: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು 2025-26ನೇ ಸಾಲಿಗೆ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.

​ಈ ಯೋಜನೆಯಡಿಯಲ್ಲಿ ಆಯ್ಕೆಯಾದ 50 ಯುವ ಬರಹಗಾರರ ಹಸ್ತಪ್ರತಿಗಳ ಪ್ರಕಟಣೆಗಾಗಿ ಪ್ರತಿ ಕೃತಿಗೆ ರೂ. 15,000/- ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.

ಅರ್ಹತೆ ಮತ್ತು ನಿಯಮಗಳು:

  • ವಯೋಮಿತಿ: ಅರ್ಜಿದಾರರು 18 ರಿಂದ 40 ವರ್ಷ ವಯೋಮಿತಿಯವರಾಗಿರಬೇಕು.
  • ಕೃತಿಯ ಸ್ವರೂಪ: ಸಲ್ಲಿಸುವ ಕೃತಿಯು ಅರ್ಜಿ ಸಲ್ಲಿಸುವವರ ಚೊಚ್ಚಲ ಕೃತಿಯಾಗಿರಬೇಕು ಮತ್ತು ಇದುವರೆಗೆ ಎಲ್ಲಿಯೂ ಪ್ರಕಟವಾಗಿರಬಾರದು.
  • ಹಸ್ತಪ್ರತಿಯ ಮಾನದಂಡ: ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಡಿ.ಟಿ.ಪಿ. ಮಾಡಿಸಿದಾಗ 1/8 ಡೆಮ್ಮಿ ಅಳತೆಯಲ್ಲಿ ಕನಿಷ್ಠ 60 ಪುಟಗಳನ್ನು ಹೊಂದಿರಬೇಕು.
  • ಸಾಹಿತ್ಯ ಪ್ರಕಾರ: ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾಲೇಖನ, ಪ್ರಬಂಧ ಮುಂತಾದ ಕನ್ನಡ ಸಾಹಿತ್ಯ ಪ್ರಕಾರಗಳಿಗೆ ಸಂಬಂಧಿಸಿರಬೇಕು.
  • ಯಾವುದು ಅನರ್ಹ: ಅನುವಾದ, ಪಠ್ಯಪುಸ್ತಕ ಹಾಗೂ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ (ಪಿಎಚ್‌ಡಿ) ಗಾಗಿ ಸಿದ್ಧಪಡಿಸಿದ ಸಂಶೋಧನಾ ಪ್ರಬಂಧಗಳನ್ನು ಪರಿಗಣಿಸಲಾಗುವುದಿಲ್ಲ.
  • ಆಶಯದ ಮಿತಿ: ಕೃತಿಯ ಪಠ್ಯದಲ್ಲಿ ಯಾವುದೇ ಧರ್ಮ, ದೇವರು, ಜಾತಿ, ಕೋಮು, ವೃತ್ತಿ, ಸಮುದಾಯ, ಭಾಷೆ, ಆಚರಣೆ, ಪದ್ಧತಿ ಇತ್ಯಾದಿ ಸಂಗತಿಗಳಿಗೆ ಅಥವಾ ರಾಷ್ಟ್ರೀಯ ನಾಯಕರುಗಳ ಕುರಿತು ನೇರವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ಮನನೋಯಿಸುವಂತಹ ಅಥವಾ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವಂತಹ ವಿಷಯಗಳು ಇರಬಾರದು.

ಅರ್ಜಿ ಸಲ್ಲಿಸುವ ವಿಧಾನ:

​ಅರ್ಜಿದಾರರು ಸ್ವ-ವಿವರವುಳ್ಳ ಪ್ರಾಧಿಕಾರದ ಅರ್ಜಿ ನಮೂನೆಯೊಂದಿಗೆ ತಮ್ಮ ವಯಸ್ಸಿನ ದೃಢೀಕರಣಕ್ಕಾಗಿ ಎಸ್.ಎಸ್.ಎಲ್.ಸಿ. ಪ್ರಮಾಣ ಪತ್ರದ ಪ್ರತಿ ಅಥವಾ ಅಧಿಕೃತ ಜನ್ಮ ದಾಖಲಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು. ಅಲ್ಲದೆ, ಪ್ರಸ್ತುತ ಸಲ್ಲಿಸಲಾಗುತ್ತಿರುವ ಕೃತಿಯು ತಮ್ಮ ಚೊಚ್ಚಲ ಕೃತಿಯಾಗಿದ್ದು, ಎಲ್ಲಿಯೂ ಪ್ರಕಟವಾಗಿಲ್ಲವೆಂದು ಸ್ವಯಂ ದೃಢೀಕರಣ ನೀಡಬೇಕು.

​ಡಿ.ಟಿ.ಪಿ. ಮಾಡಿದ ಹಸ್ತಪ್ರತಿಯನ್ನು ಈ ಎಲ್ಲ ದಾಖಲೆಗಳೊಂದಿಗೆ ಡಿಸೆಂಬರ್ 24, 2025 ರಂದು ಸಂಜೆ 5.30 ಗಂಟೆಯೊಳಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು:

ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡಭವನ, ಜೆ.ಸಿ.ರಸ್ತೆ, ಬೆಂಗಳೂರು-560002.

​ಪ್ರಾಧಿಕಾರಕ್ಕೆ ಸಲ್ಲಿಸಿದ ಹಸ್ತಪ್ರತಿಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. ಹಾಗಾಗಿ, ಮೂಲ ಹಸ್ತಪ್ರತಿಯ ಒಂದು ಪ್ರತಿಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವಂತೆ ಪ್ರಾಧಿಕಾರ ಸೂಚಿಸಿದೆ.

​ಹೆಚ್ಚಿನ ಮಾಹಿತಿಗಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ www.kannadapustakapradhikara.com ಅನ್ನು ಅಥವಾ ದೂರವಾಣಿ ಸಂಖ್ಯೆಗಳಾದ 080-22484516 ಮತ್ತು 22107704 ಗಳನ್ನು ಸಂಪರ್ಕಿಸಬಹುದು ಎಂದು ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *