ಜಾನುವಾರು ರೋಗ ನಿರ್ಮೂಲನೆ ಗುರಿ: ನ. 3 ರಿಂದ ಕಾಲು ಬಾಯಿ ರೋಗ ನಿಯಂತ್ರಣದ 8ನೇ ಸುತ್ತಿನ ಬೃಹತ್ ಲಸಿಕಾ ಅಭಿಯಾನ

Spread the love

ಧಾರವಾಡ (ಅ. 31): ಜಿಲ್ಲೆಯಲ್ಲಿ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣ ಲಸಿಕೆ ಅಭಿಯಾನದ (Foot and Mouth Disease – FMD) 8ನೇ ಸುತ್ತಿನ ಕಾರ್ಯಕ್ರಮಕ್ಕೆ ಸಿದ್ಧತೆಗಳನ್ನು ಅಂತಿಮಗೊಳಿಸಲಾಗಿದೆ. ನವೆಂಬರ್ 03, 2025 ರಿಂದ ಡಿಸೆಂಬರ್ 02, 2025ರವರೆಗೆ ಜಿಲ್ಲೆಯಾದ್ಯಂತ ಈ ಬೃಹತ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಶುಕ್ರವಾರದಂದು (ಅ. 31) ನಡೆದ ಜಿಲ್ಲಾ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಈ ಕುರಿತು ಮಾಹಿತಿ ನೀಡಿ, ಅಭಿಯಾನವನ್ನು ಯಶಸ್ವಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈತರಿಗೆ ಮತ್ತು ಆರ್ಥಿಕತೆಗೆ ಉತ್ತೇಜನ
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ರೈತರು ಮತ್ತು ಪಶುಪಾಲನೆ ಮಾಡುವವರು ಕಡ್ಡಾಯವಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯೊಂದಿಗೆ ಸಹಕರಿಸಿ, ತಮ್ಮಲ್ಲಿರುವ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು. ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಈ ಕುರಿತು ವ್ಯಾಪಕ ಮಾಹಿತಿ ನೀಡಿ, ಜಾಗೃತಿ ಮೂಡಿಸಲು ಅವರು ನಿರ್ದೇಶಿಸಿದರು.

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಲಸಿಕೆ ನೀಡುವ ಮೂಲಕ 2030ರ ಒಳಗಾಗಿ ಎಫ್‌ಎಂಡಿ ರೋಗವನ್ನು ನಿರ್ಮೂಲನೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಇದರಿಂದ ಜಾನುವಾರುಗಳ ಉತ್ಪಾದನೆ ಹೆಚ್ಚಾಗುವುದರ ಜೊತೆಗೆ, ಜಾನುವಾರು ಉತ್ಪನ್ನಗಳ ರಫ್ತಿಗೆ ಅವಕಾಶ ಸಿಗುತ್ತದೆ. ಈ ಮೂಲಕ ರೈತರ ಆದಾಯವನ್ನು ಹೆಚ್ಚಿಸಬಹುದು ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ಮನೆಬಾಗಿಲಿಗೆ ಲಸಿಕೆ: 110 ತಂಡಗಳ ನಿಯೋಜನೆ
ನವೆಂಬರ್ 3 ರಿಂದ ಡಿಸೆಂಬರ್ 2, 2025ರವರೆಗೆ ನಡೆಯುವ ಈ 8ನೇ ಸುತ್ತಿನ ಅಭಿಯಾನದಲ್ಲಿ ಸುಮಾರು 1,34,986 ದನ ಮತ್ತು 45,247 ಎಮ್ಮೆಗಳು ಸೇರಿದಂತೆ ಎಲ್ಲ ಜಾನುವಾರುಗಳಿಗೆ ರೈತರ ಮನೆಬಾಗಿಲಲ್ಲೇ ಉಚಿತವಾಗಿ ಲಸಿಕೆಯನ್ನು ನೀಡಲಾಗುವುದು.

ಅಭಿಯಾನದ ಯಶಸ್ಸಿಗಾಗಿ ಪಶುಪಾಲನಾ ಇಲಾಖೆಯು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ ಎಂದು ಉಪನಿರ್ದೇಶಕ ಡಾ. ಎಸ್.ವಿ. ಸಂತಿ ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯ ಎಲ್ಲ ಗ್ರಾಮ ಮತ್ತು ಪಟ್ಟಣಗಳನ್ನು ಸುಮಾರು 100 ಜಾನುವಾರುಗಳನ್ನು ಹೊಂದಿರುವ 1779 ಬ್ಲಾಕ್‌ಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ಬ್ಲಾಕ್‌ನಲ್ಲಿರುವ ಜಾನುವಾರು ಮಾಲೀಕರ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಲಸಿಕೆ ನೀಡಲು 110 ತಂಡಗಳನ್ನು ರಚಿಸಲಾಗಿದೆ. ಇಬ್ಬರು ಲಸಿಕೆದಾರರ ಒಂದು ತಂಡ ಪ್ರತಿದಿನ ಒಂದು ಬ್ಲಾಕ್‌ಗೆ ಭೇಟಿ ನೀಡಿ ಲಸಿಕೆ ನೀಡಲಿದ್ದಾರೆ. ಅಭಿಯಾನಕ್ಕೆ ಅಗತ್ಯವಿರುವ 1.9 ಲಕ್ಷ ಡೋಸ್ ಲಸಿಕೆ, ಸಿರಿಂಜ್, ಪ್ರಚಾರ ಸಾಮಗ್ರಿ ಮತ್ತು ತುರ್ತು ಔಷಧಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಪ್ರೊಬೇಷನರಿ ಐಎಎಸ್ ಅಧಿಕಾರಿ ರೀತಿಕಾ ವರ್ಮಾ ಸೇರಿದಂತೆ ಪಶುಪಾಲನಾ ಮತ್ತು ಇತರ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *