ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಡಿ. 13 ರಿಂದ ಫಲಪುಷ್ಪ ಪ್ರದರ್ಶನ ಮತ್ತು ಸರಸ ಮೇಳ ಆಯೋಜನೆ

Spread the love

ಧಾರವಾಡ, ಡಿ. 10: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ 2025-26 ನೇ ಸಾಲಿನ ಫಲಪುಷ್ಪ ಪ್ರದರ್ಶನ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮತ್ತು ಉದ್ಯಮ ಇಲಾಖೆಯ ಸರಸ ಮೇಳವನ್ನು ಡಿಸೆಂಬರ್ 13 ರಿಂದ ಡಿಸೆಂಬರ್ 15, 2025 ರವರೆಗೆ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಭುವನೇಶ ಪಾಟೀಲ ಅವರು ತಿಳಿಸಿದರು.

​ಬುಧವಾರದಂದು (ಡಿ.10) ಜಿಲ್ಲಾ ಪಂಚಾಯತ್ ಕಾನ್ಫರೆನ್ಸ್ ಹಾಲ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ, ಮಹಾನಗರ ಪಾಲಿಕೆ, ಕೃಷಿ ಇಲಾಖೆ, ಮೀನುಗಾರಿಕ ಇಲಾಖೆ, ಹಾನ್ ಕಾಮ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲಾಭಿವೃದ್ಧಿ ಇಲಾಖೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

​ಸ್ವ-ಸಹಾಯ ಸಂಘಗಳ ಸಬಲೀಕರಣಕ್ಕೆ ಒತ್ತು

​ಜಿಲ್ಲಾ ಪಂಚಾಯತ್ ಇಲಾಖೆ ವತಿಯಿಂದ ಮೇಳದಲ್ಲಿ 50 ರಿಂದ 60 ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಯ ಸ್ವ-ಸಹಾಯ ಸಂಘದ ಮಹಿಳೆಯರು ತಮ್ಮ ವಿವಿಧ ಉತ್ಪನ್ನಗಳು ಮತ್ತು ಖಾದ್ಯಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸ್ವ-ಸಹಾಯ ಸಂಘದ ಮಹಿಳೆಯರ ಆರ್ಥಿಕ ಮಟ್ಟ ಸುಧಾರಣೆಗೆ ಅನುಕೂಲವಾಗಲಿದೆ ಎಂದು ಸಿಇಓ ಭುವನೇಶ ಪಾಟೀಲ ಅವರು ಹೇಳಿದರು.

​ರೈತರಿಗೆ ಹೊಸ ತಂತ್ರಜ್ಞಾನಗಳ ಪರಿಚಯ

​ಈ ಮೇಳದಲ್ಲಿ ರೈತರಿಗೆ ಮತ್ತು ಸಾರ್ವಜನಿಕರಿಗೆ ತೋಟಗಾರಿಕೆ ಹಾಗೂ ಕೃಷಿಯಲ್ಲಿನ ಹೊಸ ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳನ್ನು ಮಳಿಗೆಗಳಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ಪ್ರದರ್ಶಿಸಲಾಗುತ್ತದೆ. ಜೊತೆಗೆ, ವಿವಿಧ ತೋಟಗಾರಿಕೆ ಬೆಳೆಗಳ ಹೊಸ ತಳಿಗಳ ಪರಿಚಯ, ಉದ್ಯಾನವನ ಪ್ರಿಯರಿಗೆ ವಿವಿಧ ಜಾತಿಯ ಹೂವಿನ ಹಾಗೂ ಅಲಂಕಾರಿಕ ಗಿಡಗಳ ಪರಿಚಯ, ಕೈ ತೋಟ ಹಾಗೂ ಮೇಲ್ಚಾವಣಿ ತೋಟ ಮಾಡುವುದರ ಕುರಿತು ಸಮಗ್ರ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

​ಆಕರ್ಷಣೀಯ ಕಲಾಕೃತಿಗಳು

​ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ. ಸಿ. ಭದ್ರಣ್ಣವರ ಅವರು ಮಾತನಾಡಿ, ಫಲಪುಷ್ಪ ಪ್ರದರ್ಶನದಲ್ಲಿ ಹೂವಿನಿಂದ ಅಲಂಕೃತವಾದ ಶ್ರೀ ಸಿದ್ಧಾರೂಡರ ಕೈಲಾಸ ಮಂಟಪ, ಸಾಲುಮರದ ತಿಮ್ಮಕ್ಕನ ಕಲಾಕೃತಿ, ಸೆಲ್ಫಿ ಪಾಯಿಂಟ್ ಕಲಾಕೃತಿಗಳು ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುಗಳಾಗಿರುತ್ತವೆ. ಅಲ್ಲದೆ, 15 ರಿಂದ 20 ಜಾತಿಯ ವಾರ್ಷಿಕ ಹೂವಿನ ತಳಿಗಳನ್ನು ಗುಚ್ಛಗಳ ಮಾದರಿಯಲ್ಲಿ ಜೋಡಿಸಲಾಗುತ್ತದೆ. ಲ್ಯಾಂಡ್ ಸ್ಕೇಪ್ ಡಿಸೈನ್, ತರಕಾರಿ ಮತ್ತು ಹಣ್ಣುಗಳಲ್ಲಿ ವಿವಿಧ ಕೆತ್ತನೆಗಳು (ಕಾರ್ವಿಂಗ್), ವಿವಿಧ ಎಕ್ಸೋಟಿಕ್ ಜಾತಿಯ ಕಟ್ ಫ್ಲವರ್ ಮತ್ತು ತರಕಾರಿಗಳ ಜೋಡಣೆ ಹಾಗೂ ವಿವಿಧ ಕಲಾಕೃತಿಯಲ್ಲಿ ವಸ್ತುಗಳ ಪ್ರದರ್ಶನವನ್ನು ಮಾಡಲಾಗುತ್ತೆ ಎಂದು ಮಾಹಿತಿ ನೀಡಿದರು.

​ಕೃಷಿ ಇಲಾಖೆ ವತಿಯಿಂದ ಪ್ರದರ್ಶನ

​ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ಮಾತನಾಡಿ, ಕೃಷಿ ಇಲಾಖೆಯ ಮಳಿಗೆಯಲ್ಲಿ ನೂತನ ತಂತ್ರಜ್ಞಾನಗಳು, ಇಲಾಖಾ ಯೋಜನೆಗಳು, ಕಾರ್ಯಕ್ರಮಗಳ ಕುರಿತಾದ ಮಾದರಿ ಪ್ರಾತ್ಯಕ್ಷಿಕೆಗಳು, ಮಾಹಿತಿ ಫಲಕಗಳು ಮತ್ತು ಕರಪತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.

​ಪರ್ಯಾಯ ಇಂಧನ ಮೂಲವಾಗಿ ಸೌರಶಕ್ತಿಯ ಬಳಕೆಯ ಬಗ್ಗೆ ಮಾಹಿತಿ ನೀಡುವ ಪ್ರಾತ್ಯಕ್ಷಿಕೆಗಳು, ನೂತನವಾಗಿ ಪ್ರಾರಂಭವಾದ ಸ್ಮಾರ್ಟ್ ಆ್ಯಪ್‍ಗಳು ಮತ್ತು ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಅವಕಾಶ ನೀಡಲಾಗುತ್ತದೆ. ಯಾಂತ್ರೀಕರಣ ಮತ್ತು ನೀರಾವರಿ ಸೌಲಭ್ಯಗಳ ಕುರಿತಂತೆ ಮಾದರಿ ಪ್ರಾತ್ಯಕ್ಷಿಕೆ ಹಾಗೂ ಯಂತ್ರೋಪಕರಣಗಳನ್ನು ಪ್ರದರ್ಶಿಸಲಾಗುವುದು. ಜೊತೆಗೆ, ಮಳಿಗೆಗಳಲ್ಲಿ ನೆಲಮೂಲ ತಳಿಗಳ ಬೀಜ ಪ್ರದರ್ಶನ, ಸಿರಿಧಾನ್ಯಗಳು ಮತ್ತು ಅವುಗಳ ಉತ್ಪನ್ನಗಳು, ಸಾವಯವ ಆಹಾರ ಸಾಮಗ್ರಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗುವುದು ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *