
7,920 ಫಲಾನುಭವಿಗಳಿಗೆ ಉದ್ಯೋಗ, ಸ್ವ-ಉದ್ಯೋಗಕ್ಕಾಗಿ ವೃತ್ತಿ ನೈಪುಣ್ಯತೆ ಹೆಚ್ಚಿಸುವ ತರಬೇತಿ
ಧಾರವಾಡ: ನವೆಂಬರ್ 25: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಯುವನಿಧಿ ಯೋಜನೆಯಡಿ ನೋಂದಾಯಿತ ನಿರುದ್ಯೋಗಿ ಯುವಕ, ಯುವತಿಯರಿಗೆ ‘ಯುವನಿಧಿ ಪ್ಲಸ್’ ಯೋಜನೆಯಡಿ ಉಚಿತ ಕೌಶಲ್ಯ ತರಬೇತಿಯನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ಜಿಲ್ಲೆಯಲ್ಲಿ ತಕ್ಷಣವೇ ಈ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಅವರು ಸೋಮವಾರದಂದು(ನ.24) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಯುವನಿಧಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಫಲಾನುಭವಿಗಳಿಗೆ ಕರೆ:
ಧಾರವಾಡ ಜಿಲ್ಲೆಯಲ್ಲಿ ಒಟ್ಟು 7,920 ಯುವನಿಧಿ ಫಲಾನುಭವಿಗಳಿದ್ದಾರೆ. ಈ ಎಲ್ಲ ಫಲಾನುಭವಿಗಳಿಗೆ ಜಿಲ್ಲೆಯಲ್ಲಿರುವ ಸರ್ಕಾರಿ ಐಟಿಐ, ಜಿಟಿಟಿಸಿ, ಕೆಜಿಟಿಟಿಐ ಮತ್ತು ಸಿಡಾಕ್ ತರಬೇತಿ ಸಂಸ್ಥೆಗಳಲ್ಲಿ ವಿವಿಧ ಜಾಬ್ ರೋಲ್ಗಳಲ್ಲಿ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಫಲಾನುಭವಿಗಳು ಈ ಯೋಜನೆಯಿಂದ ತಮ್ಮ ಮುಂದಿನ ಜೀವನೋಪಾಯಕ್ಕಾಗಿ ಉದ್ಯೋಗ, ಸ್ವ-ಉದ್ಯೋಗ, ಅಥವಾ ಉನ್ನತ ಶಿಕ್ಷಣಕ್ಕೆ ತೆರಳಲು ಅನುಕೂಲವಾಗಲಿದೆ. ಆದ್ದರಿಂದ, ಯುವಕ ಯುವತಿಯರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದರು.
ಯುವನಿಧಿ ಯೋಜನೆಯಡಿ ಪ್ರತಿ ತಿಂಗಳು ನೀಡುವ ನಿರುದ್ಯೋಗ ಭತ್ಯೆಯನ್ನು ಪಡೆದುಕೊಳ್ಳುತ್ತಿರುವವರು, ಭತ್ಯೆಯ ಜೊತೆಗೆ ಕೌಶಲ್ಯ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಉತ್ತಮ ಉದ್ಯೋಗ ಅಥವಾ ಸ್ವ-ಉದ್ಯೋಗಗಳನ್ನು ಪಡೆದುಕೊಳ್ಳುವತ್ತ ಗಮನ ಹರಿಸಬೇಕು. ಅಭ್ಯರ್ಥಿಗಳ ಪದವಿಗಳಿಗೆ ಅನುಗುಣವಾಗಿ ಅವರ ವೃತ್ತಿಕೌಶಲ್ಯ ಹಾಗೂ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಲು ಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದೆ. ಇದು ವ್ಯಕ್ತಿಯ ಸಂವಹನ ಕಲೆ, ಆತ್ಮಸ್ಥೈರ್ಯ ಮತ್ತು ಉದ್ಯೋಗದ ಅರ್ಹತೆಗಳನ್ನು ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಯುವನಿಧಿ ಯೋಜನೆಯಡಿ ನೋಂದಾಯಿತ ನಿರುದ್ಯೋಗಿ ಯುವಕ, ಯುವತಿಯರು ಪ್ರಸ್ತುತ ಸಮಾಜದಲ್ಲಿ ಅಗತ್ಯವಿರುವ ಸೇವೆ ಮತ್ತು ಉದ್ಯೋಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಈ ನಿಟ್ಟಿನಲ್ಲಿ ಅಗತ್ಯ ಅರ್ಹತೆಗಳನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರವೀಂದ್ರ ದ್ಯಾಬೇರಿ ಸ್ವಾಗತಿಸಿ ಸಭೆ ನಿರ್ವಹಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ತೇಜಸ್ವಿನಿ ನಾರಾಯಣಕರ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್.ಕೆಳದಿಮಠ ಸೇರಿದಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆಯ ಜಿಲ್ಲಾ ನೊಡಲ್ ಅಧಿಕಾರಿ ಹಾಗೂ ವಿವಿಧ ತರಬೇತಿ ಸಂಸ್ಥೆಗಳ ಪ್ರಾಂಶುಪಾಲರುಗಳು ಹಾಜರಿದ್ದರು.

