
ಬೆಳಗಾವಿ: ವೈವಾಹಿಕ ಜೀವನದಲ್ಲಿನ ಸಂಶಯ ಮತ್ತು ಕಿರುಕುಳದಿಂದ ವಿಚ್ಛೇದನ ಪಡೆದಿದ್ದರೂ, ಆ ದ್ವೇಷ ತಣ್ಣಗಾಗಿರಲಿಲ್ಲ. ಇದೇ ದ್ವೇಷದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯೊಬ್ಬ ತನ್ನ ಮಾಜಿ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ. ಈ ಕೃತ್ಯದ ಆರೋಪಿ ಸಂತೋಷ್ ಕಾಂಬಳೆ, ನಿಪ್ಪಾಣಿ ಪೊಲೀಸ್ ಠಾಣೆಯ ಪೊಲೀಸ್ ಪೇದೆಯಾಗಿದ್ದು, ಸವದತ್ತಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಕೊಲೆಯಾದ ಮಹಿಳೆಯನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಸವದತ್ತಿ ಘಟಕದ ಬಸ್ ಕಂಡಕ್ಟರ್ ಕಾಶಮ್ಮ ನೆಲ್ಲಿಕಟ್ಟಿ (34) ಎಂದು ಗುರುತಿಸಲಾಗಿದೆ. ಕಾಶಮ್ಮ ಮತ್ತು ಆರೋಪಿ ಸಂತೋಷ್ ಕಾಂಬಳೆ ಸುಮಾರು 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು ಮತ್ತು ಅವರಿಗೆ ಒಬ್ಬ ಮಗನಿದ್ದಾನೆ. ಆದರೆ, ಮದುವೆಯ ನಂತರ ಸಂತೋಷ್ ತನ್ನ ಪತ್ನಿಯ ಮೇಲೆ ವಿನಾಕಾರಣ ಸಂಶಯ ಪಡುತ್ತಾ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದ ಎನ್ನಲಾಗಿದೆ. ಗಂಡನ ಕಿರುಕುಳದಿಂದ ಬೇಸತ್ತ ಕಾಶಮ್ಮ ಆತನ ವಿರುದ್ಧ ದೂರು ದಾಖಲಿಸಿದ್ದರು.
ದೂರಿನ ಪರಿಣಾಮವಾಗಿ ಸಂತೋಷ್ ಅಮಾನತುಗೊಂಡಿದ್ದು, ನಂತರ ಇಬ್ಬರೂ ವಿಚ್ಛೇದನ ಪಡೆದು ದೂರವಾಗಿದ್ದರು. ಕಾಶಮ್ಮ ಸವದತ್ತಿ ಡಿಪೋಗೆ ವರ್ಗಾವಣೆ ಮಾಡಿಸಿಕೊಂಡು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅಕ್ಟೋಬರ್ 13ರಂದು ಸಂತೋಷ್ ಕಾಂಬಳೆ, ಸವದತ್ತಿಯಲ್ಲಿರುವ ಕಾಶಮ್ಮ ಅವರ ಮನೆಗೆ ಹೋಗಿದ್ದಾನೆ. ಅಲ್ಲಿ ಇಬ್ಬರ ನಡುವೆ ತೀವ್ರ ಜಗಳ ನಡೆದಿದ್ದು, ಕೋಪಗೊಂಡ ಸಂತೋಷ್ ಚಾಕುವಿನಿಂದ ಕಾಶಮ್ಮ ಅವರ ಕತ್ತು ಕೊಯ್ದು ಕ್ರೂರವಾಗಿ ಹತ್ಯೆಗೈದಿದ್ದಾನೆ. ಕೊಲೆ ಮಾಡಿದ ನಂತರ ಆರೋಪಿ ಸಂತೋಷ್ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದ.
ಈ ಕೊಲೆ ಪ್ರಕರಣ ಅಕ್ಟೋಬರ್ 18, 2025 ರಂದು ಬೆಳಕಿಗೆ ಬಂದಿದೆ. ಕಾಶಮ್ಮ ಅವರು ಕರ್ತವ್ಯಕ್ಕೆ ಹಾಜರಾಗದಿದ್ದಾಗ ಆತಂಕಗೊಂಡ ಸಹೋದ್ಯೋಗಿಗಳು ಮತ್ತು ಕುಟುಂಬ ಸದಸ್ಯರು ಅವರ ಮನೆ ಬಳಿ ಬಂದಾಗ ಮನೆಯಿಂದ ದುರ್ವಾಸನೆ ಬರುತ್ತಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಬಾಗಿಲು ಒಡೆದು ಒಳ ಹೋಗಿ ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ಕಾಶಮ್ಮ ಅವರ ಮೃತದೇಹ ಪತ್ತೆಯಾಗಿದೆ. ಪೊಲೀಸರು ತನಿಖೆ ನಡೆಸಿ ಕೊಲೆಗೆ ಕಾರಣನಾಗಿದ್ದ ಪೊಲೀಸ್ ಪೇದೆ ಸಂತೋಷ್ ಕಾಂಬಳೆಯನ್ನು ಬಂಧಿಸಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಯ ನಿಖರ ಕಾರಣಗಳ ಕುರಿತು ಮತ್ತಷ್ಟು ತನಿಖೆ ಮುಂದುವರೆದಿದೆ.

