
ನವಲಗುಂದ: ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು ಏಳು ವರ್ಷಗಳ ಕಾಲ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಹುಬ್ಬಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ ಜಿ. ಸೂಡಿ ಅವರು ಪ್ರತಿಷ್ಠಿತ ಪಿಎಚ್.ಡಿ ಪದವಿಗೆ ಭಾಜನರಾಗಿದ್ದಾರೆ. ಮಧ್ಯಪ್ರದೇಶದ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯವು ಇವರ ಸಂಶೋಧನಾ ಪ್ರಬಂಧವನ್ನು ಅಂಗೀಕರಿಸಿ ಈ ಉನ್ನತ ಪದವಿಯನ್ನು ಪ್ರಧಾನ ಮಾಡಿದೆ.
ಬಸವರಾಜ ಸೂಡಿ ಅವರು “ಕರ್ನಾಟಕದ ಧಾರವಾಡ ಜಿಲ್ಲೆಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಳಕೆದಾರರ ವಿಶೇಷ ಉಲ್ಲೇಖದೊಂದಿಗೆ ಗ್ರಾಹಕರ ನಡವಳಿಕೆಯ ಅಧ್ಯಯನದ ಪ್ರಾಯೋಗಿಕ ವಿಶ್ಲೇಷಣೆ” ಎಂಬ ವಿಷಯದ ಕುರಿತು ಸುದೀರ್ಘ ಸಂಶೋಧನೆ ನಡೆಸಿ ಮಹಾ ಪ್ರಬಂಧವನ್ನು ಮಂಡಿಸಿದ್ದರು. ಇಂದಿನ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಮತ್ತು ಗ್ರಾಹಕರ ಮನಸ್ಥಿತಿಯ ಕುರಿತಾದ ಇವರ ಆಳವಾದ ಅಧ್ಯಯನವನ್ನು ಗುರುತಿಸಿ ವಿಶ್ವವಿದ್ಯಾಲಯವು ಈ ಗೌರವ ನೀಡಿದೆ.
ಇವರ ಈ ಶೈಕ್ಷಣಿಕ ಸಾಧನೆಗೆ ನವಲಗುಂದ ಶಾಸಕ ಎನ್.ಎಚ್. ಕೊನರೆಡ್ಡಿ, ಪ್ರಮುಖರಾದ ಡಾ. ಎಂ.ಬಿ. ಬಾಗಡಿ, ಸಂತೋಷ್ ಹುಬ್ಬಳ್ಳಿ, ಬಿ.ವಿ. ಏಣಗಿ, ಪ್ರವೀಣ್ ದೊಡ್ಡಮನಿ, ಪ್ರಸನ್ನ ಫಂಡರಿ, ಸವಿತಾ ಚಿಕ್ಕಣ್ಣವರ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ, ಇವರ ಹಳೆಯ ವಿದ್ಯಾರ್ಥಿಗಳಾದ ಸಂಜಯ ಗುರಿಕಾರ, ಗಂಗಾಧರ ಕತ್ತಿ ಸೇರಿದಂತೆ ಅಪಾರ ವಿದ್ಯಾರ್ಥಿ ಬಳಗವು ತಮ್ಮ ನೆಚ್ಚಿನ ಗುರುವಿನ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದೆ

