ಡಾ. ಬಿ. ಆರ್ ಅಂಬೇಡ್ಕರ್‌ಗೆ ಪುಷ್ಪನಮನ: ಕರ್ನಾಟಕ ದಲಿತ ಸಂಘರ್ಷ ಸಮೀತಿ ವತಿಯಿಂದ 69ನೇ ಮಹಾಪರಿನಿರ್ವಾಣ ದಿನ ಆಚರಣೆ

Spread the love

ಧಾರವಾಡ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಧಾರವಾಡ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

​ನಗರದ ಕಲಾಭವನದ ಬಳಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಸಂಘಟನೆಯ ಪದಾಧಿಕಾರಿಗಳು ಶ್ರದ್ಧಾ ಭಕ್ತಿಯಿಂದ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.

​ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಶರೇವಾಡ ಅವರು, ಅಂಬೇಡ್ಕರ್ ಎಂದರೆ ಕೇವಲ ವ್ಯಕ್ತಿಯಲ್ಲ, ಅವರು ಒಂದು ಮಹಾನ್ ಶಕ್ತಿ, ಧ್ಯೇಯ ಮತ್ತು ತತ್ವದ ಪ್ರತೀಕ. ದೇಶದ ಅಖಂಡತೆಗಾಗಿ ಅವರ ಸೇವೆ ಅನನ್ಯವಾದುದು. ಅವರನ್ನು ಕೇವಲ ಶೋಷಿತ ವರ್ಗದ ನಾಯಕರು ಎಂದು ಪರಿಗಣಿಸದೆ, ಅವರು ಸಮಾಜದ ಎಲ್ಲ ವರ್ಗಗಳ ನಾಯಕರಾಗಿದ್ದಾರೆ ಎಂದು ಬಣ್ಣಿಸಿದರು.

​ಡಾ. ಅಂಬೇಡ್ಕರ್ ಅವರು ಸಂಘರ್ಷದ ಹಾದಿ ತುಳಿಯದೆ ಸಾಮರಸ್ಯದ ಮೂಲಕ ಸಮಾಜವು ಒಗ್ಗೂಡುವಂತೆ ಶ್ರಮಿಸಿದರು. ಅವರ ವ್ಯಕ್ತಿತ್ವ ಮತ್ತು ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಪಾಲನೆ ಮಾಡುವ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕು ಎಂದು ಶರೇವಾಡ ಹೇಳಿದರು.

​ಅಂಬೇಡ್ಕರ್ ರಚಿಸಿದ ಸಂವಿಧಾನವು ಎಲ್ಲರಿಗೂ ಹಕ್ಕುಗಳನ್ನು ಮತ್ತು ಜವಾಬ್ದಾರಿಗಳನ್ನು ನೀಡಿದೆ. ನಾಗರಿಕರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವುದರ ಜೊತೆಗೆ ಸಂವಿಧಾನದ ಆಶಯಗಳನ್ನು ಅರ್ಥೈಸಿಕೊಂಡು ಗುರುತರ ಜವಾಬ್ದಾರಿ ನಿರ್ವಹಿಸಬೇಕು. ಯುವಜನರು ವಿಶೇಷವಾಗಿ ಸಂವಿಧಾನದ ಆಶಯಗಳನ್ನು ತಿಳಿದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

​ಈ ಸಂದರ್ಭದಲ್ಲಿ ಮುಖಂಡರಾದ ಪ್ರಕಾಶ ಸಿದ್ದಪ್ಪನವರ, ಭರತರಾಜ ಅರವೆಡ್, ಲೋಕೇಶ ಮ್ಯಾಗೇರಿ, ಸಂಜು ಯಲ್ಲಾಪುರ, ರೆಹಮಾನ ನಿಚ್ಚಿನಿಕ್ಕಿ, ಸಿದ್ದು ಹಾದಿಮನಿ, ಸುರೇಶ ತಡಸದ ಸೇರಿದಂತೆ ಸಂಘಟನೆಯ ಹಲವಾರು ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *