
ಕುಂದಗೋಳ: ತಾಲೂಕಿನ ಶಿರೂರ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ ಘೋರ್ಪಡೆ ಅವರು ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದ ನಿರಂತರವಾಗಿ ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಂಡು, ಹೈನುಗಾರಿಕೆ ಮಾಡುವ ರೈತರು ಹಾಗೂ ಮಹಿಳೆಯರಿಗೆ ಆರ್ಥಿಕ ಉತ್ತೇಜನ ನೀಡುತ್ತಾ ಬಂದಿರುವ ಸಂಘದ ಕಾರ್ಯವೈಖರಿ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಏಳಿಗೆಯಲ್ಲಿ ಪದಾಧಿಕಾರಿಗಳ ಶ್ರಮ ಮಹತ್ವದ್ದಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗೂಡಿ ಹೈನುಗಾರರ ಹಿತದೃಷ್ಟಿಯಿಂದ ಇನ್ನೂ ಉತ್ತಮ ಕೆಲಸಗಳನ್ನು ಮಾಡುವಂತೆ ಮನವಿ ಮಾಡಿದರು.
ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಸಂಘಕ್ಕೆ ಸರ್ವಾನುಮತದಿಂದ ಅಧ್ಯಕ್ಷರಾಗಿ ಶಿಲ್ಪಾ ದೇವಕ್ಕನವರ ಹಾಗೂ ಉಪಾಧ್ಯಕ್ಷರಾಗಿ ಜಯಪ್ಪ ಕಮಡೊಳ್ಳಿ ಆಯ್ಕೆಯಾಗಿದ್ದಾರೆ. ಇವರೊಂದಿಗೆ ನಿರ್ದೇಶಕರಾಗಿ ಬಸಮ್ಮ ತಳವಾರ, ನಿಂಗಪ್ಪಣ್ಣ ಭಜಮ್ಮನವರ, ರಾಮನಗೌಡ ಫಕ್ಕೀರಗೌಡ್ರ, ಮುದಕಪ್ಪ ಕೋಳೂರ ಹಾಗೂ ನಜೀರಹ್ಮದ ಯರಗುಪ್ಪಿ ಅವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಈಶಣ್ಣ ಸಾದರ, ಗೂಳಪ್ಪ ಸುಣಗಾರ, ಖಾಜಾಸಾಬ್ ಸುಂಕದ, ವಿನಾಯಕ ಗುಂಜಾಳ ಸೇರಿದಂತೆ ಗ್ರಾಮದ ಪ್ರಮುಖರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

