ಅಣ್ಣಿಗೇರಿಯಲ್ಲಿ ತಕ್ಷಣವೇ ಕಡಲೆ ಖರೀದಿ ಕೇಂದ್ರ ಆರಂಭಿಸಿ: ಭಾರತೀಯ ಕಿಸಾನ್ ಸಂಘದ ಆಗ್ರಹ

Spread the love

ಅಣ್ಣಿಗೇರಿ: “ರೈತರು ಬೆಳೆದ ಬೆಳೆಗೆ ಸರ್ಕಾರ ಸೂಕ್ತ ಮಾನ್ಯತೆ ನೀಡಬೇಕು ಹಾಗೂ ತಕ್ಷಣವೇ ನಗರದಲ್ಲಿ ಕಡಲೆ ಖರೀದಿ ಕೇಂದ್ರವನ್ನು ಪ್ರಾರಂಭಿಸಿ ಪ್ರತಿ ಎಕರೆಗೆ ಕನಿಷ್ಠ 8 ಕ್ವಿಂಟಲ್ ಖರೀದಿ ಪ್ರಮಾಣ ನಿಗದಿಪಡಿಸಬೇಕು,” ಎಂದು ಭಾರತೀಯ ಕಿಸಾನ್ ಸಂಘದ ತಾಲೂಕು ಉಪಾಧ್ಯಕ್ಷ ಪಂಚಾಕ್ಷರಿ ಬೆಳೆಬಾಳ ಒತ್ತಾಯಿಸಿದರು.

​ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ವತಿಯಿಂದ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿ ಅವರು ಮಾತನಾಡಿದರು. ಬೆಳೆ ಕಟಾವಿಗೆ ಬರುವ ಮೊದಲೇ ಸರ್ಕಾರ ಕನಿಷ್ಠ ಬೆಂಬಲ ಬೆಲೆ (MSP) ಖರೀದಿ ಕೇಂದ್ರಗಳನ್ನು ತೆರೆಯಬೇಕು. ಜಿಪಿಎಸ್ ಪದ್ಧತಿಯನ್ನು ಸಡಿಲಿಸಿ ರೈತರಿಗೆ ಬೆಳೆ ನಿಗದಿಪಡಿಸುವಲ್ಲಿ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

ಸಿಬಿಲ್ ಸ್ಕೋರ್ ಮಾನದಂಡ ಬೇಡ:

ಇದೇ ಸಂದರ್ಭದಲ್ಲಿ ಮಾತನಾಡಿದ ರಾಜು ವರ್ಣೇಕರ್ ಅವರು, “ಬ್ಯಾಂಕುಗಳು ರೈತರಿಗೆ ಬೆಳೆ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಅನ್ನು ಮಾನದಂಡವಾಗಿ ಪರಿಗಣಿಸಬಾರದು. ಶೇ. 7ರ ಬಡ್ಡಿ ದರದಲ್ಲಿ ನೀಡುವ ಸಾಲದ ಮೊತ್ತವನ್ನು ಪ್ರಸ್ತುತ 3 ಲಕ್ಷದಿಂದ 5 ಲಕ್ಷ ರೂಪಾಯಿಗಳಿಗೆ ಏರಿಸಬೇಕು. ಒಟಿಎಸ್ (ಒಂದು ಬಾರಿ ತೀರುವಳಿ) ಆದ ಸಾಲಗಳಿಗೆ ಮರು ಸಾಲ ನೀಡಲು ಬ್ಯಾಂಕುಗಳು ಕ್ರಮ ವಹಿಸಬೇಕು,” ಎಂದು ತಿಳಿಸಿದರು.

​ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಗುರುನಾಥ್ ಗೌಡ್ರ, ತಾಲೂಕು ಅಧ್ಯಕ್ಷ ಡಿ.ಬಿ. ನರಗುಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಷಣ್ಮುಖ ಕಲ್ಲೂರ್ ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿ ಸೋಮಶೇಖರ ಹಿರೇಮಠ ಪಾಲ್ಗೊಂಡಿದ್ದರು. ಮುಖಂಡರಾದ ಭೀಮಣ್ಣ ಜಂತ್ಲಿ, ಗುರುಪಾದ ಹೊಸಳ್ಳಿ, ನಿಂಗಪ್ಪ ಬಡ್ಡೆಪ್ಪನವರ್, ಬಾಳಪ್ಪ ನರಗುಂದ, ವಿರುಪಾಕ್ಷಿ ನವಲಗುಂದ, ಪತ್ರೇಶ್ವರ ಮಲಸಮುದ್ರ, ಈರಪ್ಪ ಗುರಿಕಾರ್, ಜಗದೀಶ್ ಸನಾದಿ ಸೇರಿದಂತೆ ಸಂಘದ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದು, ರೈತರ ಹಿತರಕ್ಷಣೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರಿದರು.

Leave a Reply

Your email address will not be published. Required fields are marked *