ವ್ಯವಹಾರದಲ್ಲಿ ಡಿಜಿಟಲ್ ಇಂಡಿಯಾ ಅಳವಡಿಸಿಕೊಂಡು ಎಲ್ಲರೂ ವರ್ಗಾವಣೆ ಆಗಬೇಕು: ಕೇಂದ್ರ ಪಿಂಚಣಿ ಇಲಾಖೆಯ ಅಧೀನ ಕಾರ್ಯದರ್ಶಿ ದೀಪಕ ಗುಪ್ತ

Spread the love

ಧಾರವಾಡ, ನ.20: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಾದ ‘ಡಿಜಿಟಲ್ ಇಂಡಿಯಾ’ ಅಭಿಯಾನವನ್ನು ಜೀವನ ಮತ್ತು ವ್ಯವಹಾರಗಳಲ್ಲಿ ಎಲ್ಲರೂ ಅಳವಡಿಸಿಕೊಂಡಾಗ ಮಾತ್ರ ಅದು ನಿಜಾರ್ಥದಲ್ಲಿ ಯಶಸ್ವಿಯಾಗುತ್ತದೆ ಎಂದು ಕೇಂದ್ರ ಸರ್ಕಾರದ ಪಿಂಚಣಿ ಇಲಾಖೆಯ ಅಧೀನ ಕಾರ್ಯದರ್ಶಿ ದೀಪಕ ಗುಪ್ತ ಹೇಳಿದರು.

ನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಮುಖ್ಯಶಾಖೆಯಲ್ಲಿ ನಿವೃತ್ತಿದಾರರಿಗಾಗಿ ಕೇಂದ್ರ ಸರ್ಕಾರದಿಂದ ಪರಿಚಯಿಸಲ್ಪಟ್ಟ ನೂತನ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಕುರಿತು ಜಾಗೃತಿ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಈಗ ಜನರು ಎಲ್ಲಿಂದಲಾದರೂ ರೈಲ್ವೆ ಟಿಕೆಟ್ ಬುಕ್ ಮಾಡುವುದು, ಹಣ ವರ್ಗಾವಣೆ ಸೇರಿದಂತೆ ಅನೇಕ ಆನ್‌ಲೈನ್ ವ್ಯವಹಾರಗಳನ್ನು ಸುಲಭವಾಗಿ ಮಾಡುತ್ತಿರುವುದನ್ನು ಉದಾಹರಿಸಿ, “ಅದೇ ರೀತಿಯಲ್ಲಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಸರ್ಕಾರವು ಸುಲಭ ವೇದಿಕೆಯನ್ನು ಸೃಷ್ಟಿಸಿದೆ,” ಎಂದು ವಿವರಿಸಿದರು.

ಒಬ್ಬಂಟಿಯಾಗಿ ಇರುವವರು, ಅನಾರೋಗ್ಯದಿಂದ ಬಳಲುವವರು ಅಥವಾ ಹಲವು ಕಾರಣಗಳಿಗೆ ಬ್ಯಾಂಕ್‌ಗೆ ಬರುವಲ್ಲಿ ತೊಂದರೆ ಅನುಭವಿಸುವವರಿಗೆ ಈ ವ್ಯವಸ್ಥೆ ದೊಡ್ಡ ಸಹಾಯವಾಗಲಿದೆ ಎಂದು ಗುರುತಿಸಿದ ಅವರು, “ಮನೆಯಲ್ಲಿಯೇ ಮೊಬೈಲ್ ಮೂಲಕ, ಅಥವಾ ನೆರವಿಗೆ ಯಾರಾದರೂ ಒಬ್ಬರ ಸಹಾಯ ಪಡೆದು ಸರ್ಟಿಫಿಕೇಟ್ ಸಲ್ಲಿಸಬಹುದು,” ಎಂದು ಹೇಳಿದರು.

ಪಿಂಚಣಿ ಇಲಾಖೆಯ ಹಿರಿಯ ಅಧಿಕಾರಿ ಉಮೇಶ ಪ್ರಸಾದ ಶಾ ಮಾತನಾಡಿ, ಈ ವರ್ಷ 2 ಲಕ್ಷ 20 ಸಾವಿರ ಪಿಂಚಣಿದಾರರನ್ನು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅಭಿಯಾನದ ವ್ಯಾಪ್ತಿಗೆ ತರಲು ಯೋಜಿಸಲಾಗಿದೆ ಎಂದು ಹೇಳಿದರು. “ಪಿಂಚಣಿದಾರರಿಗೆ ನೀಡುವ ಸೇವೆಗಳು ಸುಲಭ, ವೇಗವಾದ ಮತ್ತು ತೊಂದರೆ ರಹಿತವಾಗಿರಬೇಕು. ಹಿರಿಯರು ಬ್ಯಾಂಕ್ ಓಡಾಟ ಮಾಡಲು ತೊಂದರೆ ಅನುಭವಿಸದಂತೆ ಮನೆಯಲ್ಲಿಯೇ ಅಥವಾ ಸಮೀಪದ ಕೇಂದ್ರದಲ್ಲಿ ಸರ್ಟಿಫಿಕೇಟ್ ನೀಡಲು ವ್ಯವಸ್ಥೆಯನ್ನು ಬಲಪಡಿಸಿದ್ದೇವೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹುಬ್ಬಳ್ಳಿ ವಲಯದ ಪ್ರಾದೇಶಿಕ ವ್ಯವಸ್ಥಾಪಕಿ ಸುಮಾ ಜಿ.ಕೆ. ಅವರು ಸ್ವಾಗತಿಸಿ ಪ್ರಸ್ತಾವನೆ ಸಲ್ಲಿಸಿದರು. ಧಾರವಾಡ ಎಸ್‌ಬಿಐ ಮುಖ್ಯಶಾಖೆಯ ಮುಖ್ಯ ವ್ಯವಸ್ಥಾಪಕ ರೂಪೇಶ ಮಿಶ್ರಾ ‘ಡಿಜಿಟಲ್ ಇಂಡಿಯಾ’ ಮಹತ್ವವನ್ನು ವಿವರಿಸಿದರು. ವಿದ್ಯಾಸಾಗರ ದೀಕ್ಷಿತ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಎಸ್‌ಬಿಐ ಅಧಿಕಾರಿಗಳು, ಸಿಬ್ಬಂದಿ, ಪಿಂಚಣಿದಾರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *