
ಧಾರವಾಡ:ಗಾದೆಗಳು ನಮಗೆ ಜೀವನ ಪಾಠ ಕಲಿಸುವ ಪ್ರಬಲ ಮಾಧ್ಯಮಗಳಾಗಿವೆ. ಅವು ನಮ್ಮ ಹಿರಿಯರ ಲೋಕಾನುಭವದ ಬದುಕಿನ ಮಾತುಗಳಾಗಿದ್ದು, ವೇದ ಸುಳ್ಳಾದರೂ ಗಾದೆ ಎಂದಿಗೂ ಸುಳ್ಳಾಗುವುದಿಲ್ಲ ಎಂದು ಜೆ.ಎಸ್.ಎಸ್. ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಗಂಗಾ ಚವಣ್ಣವರ ಅವರು ಹೇಳಿದರು. ಶನಿವಾರದಂದು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ದಿ. ಆನಂದ ಚಿಗಟೇರಿ ಸಂಸ್ಮರಣಾ ದತ್ತಿ ಕಾರ್ಯಕ್ರಮದಲ್ಲಿ ‘ಕನ್ನಡ ಗಾದೆ ಮಾತುಗಳ ಆಧರಿಸಿ ಕಥೆ ಹೇಳುವ ಸ್ಪರ್ಧೆ’ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ತ್ವರಿತ ಕಾಲದಲ್ಲಿ ಕೇವಲ ಜ್ಞಾನವೊಂದಿದ್ದರೆ ಸಾಲದು, ಜ್ಞಾನದ ಜೊತೆಗೆ ಕೌಶಲ್ಯವೂ ಬಹಳ ಮುಖ್ಯ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತರಾಗದೆ, ಪಠ್ಯ ಮೀರಿದ ಜ್ಞಾನವನ್ನು ಗಳಿಸುವುದು ಅಗತ್ಯವಾಗಿದೆ. ಗಾದೆಗಳು ನಮ್ಮ ದೈನಂದಿನ ಬದುಕಿನ ಮೂಲವಾಗಿದ್ದು, ನಮ್ಮ ಸಮಾಜದ ಸಂಸ್ಕೃತಿ, ಆಚಾರ ಮತ್ತು ವಿಚಾರಗಳನ್ನು ಪ್ರತಿಬಿಂಬಿಸುತ್ತವೆ. ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಮುಕ್ತವಾಗಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸುತ್ತಿರುವುದು ಅಭಿನಂದನೀಯ ಎಂದು ಅವರು ಹೇಳಿದರು.
ಜೆ.ಎಸ್.ಎಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ದೀಪಾ ಸಂಕಪಾಳೆ ಅವರು ಮಾತನಾಡಿ, ಗಾದೆಗಳು ಭಾಷೆಯ ಅವಿಭಾಜ್ಯ ಅಂಗಗಳಾಗಿವೆ. ಜೀವನದ ಅನುಭವ, ಜ್ಞಾನ ಮತ್ತು ನಂಬಿಕೆಗಳನ್ನು ಸಂಕ್ಷಿಪ್ತವಾಗಿ ರೂಪಕಗಳ ಮೂಲಕ ವ್ಯಕ್ತಪಡಿಸುವ ಸಾಂಪ್ರದಾಯಿಕ ಹೇಳಿಕೆಗಳಾಗಿವೆ. ಅದರಲ್ಲೂ, ಜಾನಪದದ ಅನೇಕ ಗಾದೆಗಳು ಮೌಖಿಕ ಪರಂಪರೆಯ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರಾದ ಶಿವಾನಂದ ಚೌಗಲಾ ಮಾತನಾಡಿ, ಇಂದು ಮಹಿಳೆಯರು ಹೇಳಿದ ಗಾದೆಗಳು ಸತ್ಯ ಹಾಗೂ ಸತ್ವವುಳ್ಳವುಗಳಾಗಿವೆ. ಮಹಿಳಾ ಮಂಡಳದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದು ಖುಷಿ ಎನಿಸಿದೆ. ರಿಯಾಲಿಟಿ ಶೋ ದಂತಹ ಕಾರ್ಯಕ್ರಮಗಳಲ್ಲಿ ನಮ್ಮ ಕನ್ನಡದ ಮಹಿಳೆಯರು ಹೆಚ್ಚು ಭಾಗವಹಿಸುವಂತಾಗಬೇಕು ಎಂದು ಆಶಿಸಿದರು.
ಈ ಕಥಾ ಸ್ಪರ್ಧೆಯಲ್ಲಿ ಜಯಶ್ರೀ ಗುತ್ತಲ ಪ್ರಥಮ, ಜಯಶೀಲಾ ಹಿರೇಮಠ ದ್ವಿತೀಯ ಮತ್ತು ಮಂಜುಳಾ ಹೊಸೂರ ತೃತೀಯ ಸ್ಥಾನ ಪಡೆದರೆ, ವಿಜಯಾ ಕುಲಕರ್ಣಿ ಹಾಗೂ ಪ್ರೇಮಾ ನಡೆಕಟ್ಟಿ ಅವರು ಸಮಾಧಾನಕರ ಬಹುಮಾನ ಪಡೆದರು. ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ದತ್ತಿದಾನಿಗಳ ಪರವಾಗಿ ಡಾ. ಮಂಗಳಾ ಚಿಗಟೇರಿ ಹಾಗೂ ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಉಪಸ್ಥಿತರಿದ್ದು ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ಅವರು ಸ್ವಾಗತಿಸಿದರು. ಡಾ. ನಿರ್ಮಲಾ ಚಿಗಟೇರಿ ಮತ್ತು ಡಾ. ಶಾರದಾ ಚಿಗಟೇರಿ ಪರಿಚಯಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಡಾ. ಮಹೇಶ ಧ. ಹೊರಕೇರಿ ಕಾರ್ಯಕ್ರಮ ನಿರ್ವಹಿಸಿದರು. ವೀರಣ್ಣ ಒಡ್ಡೀನ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಡಾ ಶೈಲಜಾ ಅಮರಶೆಟ್ಟಿ, ಪ್ರೊ. ಈಶಣ್ಣ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು

