ಹಾವೇರಿ ಸಮಾವೇಶಕ್ಕೆ ಬಸ್ ನಿಯೋಜನೆ: ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ರೈತ ಸಂಘದ ಆತಂಕ

Spread the love

ರಾಣೇಬೆನ್ನೂರು: ಹಾವೇರಿಯಲ್ಲಿ ಫೆಬ್ರವರಿ 14 ರಂದು ನಡೆಯಲಿರುವ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿರುವುದನ್ನು ರೈತ ಸಂಘಟನೆಯ ಮುಖಂಡ ಹನುಮಂತಪ್ಪ ಕಬ್ಬಾರ ತೀವ್ರವಾಗಿ ಖಂಡಿಸಿದ್ದಾರೆ. ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಯ ಈ ಕ್ರಮದಿಂದ ವಿದ್ಯಾರ್ಥಿಗಳು ಹಾಗೂ ರೈತರಿಗೆ ತೊಂದರೆಯಾಗುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

​ಪ್ರಸ್ತುತ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳು ಜರುಗುತ್ತಿದ್ದು, ಶನಿವಾರವೂ ಪರೀಕ್ಷೆ ನಿಗದಿಯಾಗಿದೆ. ಇಂತಹ ಸಂದರ್ಭದಲ್ಲಿ ಹಳ್ಳಿಗಳಿಗೆ ಹೋಗುವ ಬಸ್‌ಗಳನ್ನು ರದ್ದುಗೊಳಿಸಿ ಸಮಾವೇಶಕ್ಕೆ ಕಳುಹಿಸಿದರೆ, ಪರೀಕ್ಷೆಗೆ ಹಾಜರಾಗಬೇಕಾದ ಮಕ್ಕಳ ಭವಿಷ್ಯಕ್ಕೆ ಹೊಣೆ ಯಾರು ಎಂದು ಅವರು ಪ್ರಶ್ನಿಸಿದರು. ಈ ಸಮಸ್ಯೆಯನ್ನು ಮನಗಂಡು ಜಿಲ್ಲಾಡಳಿತವು ತಕ್ಷಣ ಎಚ್ಚೆತ್ತುಕೊಳ್ಳಬೇಕು. ಶನಿವಾರ ಒಂದು ದಿನ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ, ಪ್ರಥಮ ಪಿಯುಸಿ ಪರೀಕ್ಷೆಯನ್ನು ಮುಂದೂಡಬೇಕು. ಒಂದು ವೇಳೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾದಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

​ಇದೇ ವೇಳೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಾಳೆ ನಡೆಯುವ ಸಮಾವೇಶದಲ್ಲಿ ಮೌನ ಪ್ರತಿಭಟನೆ ನಡೆಸುವುದಾಗಿ ಅವರು ತಿಳಿಸಿದರು. ರಾಣೇಬೆನ್ನೂರು ತಾಲೂಕಿನ ಗುಡಗೂರು ಗ್ರಾಮದ ರೈತರ 200 ಎಕರೆಗೂ ಅಧಿಕ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ಸೋಲಾರ್ ಪ್ಲಾಂಟೇಷನ್ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ನಗರದಲ್ಲಿರುವ ಮೈಕ್ರೋಫೈನಾನ್ಸ್‌ಗಳನ್ನು ಮುಚ್ಚಿಸಿ, ರೈತರು ಅಲ್ಲಿ ಪಡೆದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಈ ಎಲ್ಲ ಬೇಡಿಕೆಗಳ ಕುರಿತು ಸಮಾವೇಶಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಕಬ್ಬಾರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಸಣ್ಣ ಮ್ಯಾಳಗೇರಿ, ನೀಲಮ್ಮ ಮ್ಯಾಳಗೇರಿ, ಶೈಲಮ್ಮ ಹರನಗಿರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *